ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರ ಜೈಲಿಗೆ ಹೋಗುವ ವೇಳೆ ದರ್ಶನ್ ಧರಿಸಿದ್ದ ಕನ್ನಡಕ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೆ ಈ ಬಗ್ಗೆ ಜೈಲು ಸಿಬ್ಬಂದಿ ವಿರುದ್ಧ ಕ್ರಮಕ್ಕೂ ಪತ್ರ ಬರೆಯಲಾಗಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಳ್ಳಾರಿ ಎಸ್ ಪಿ ಶೋಭಾ ರಾಣಿ ದರ್ಶನ್ ಧರಿಸಿದ್ದು ಪವರ್ ಗ್ಲಾಸ್ ಅದಕ್ಕೆ ಜೈಲಿನಲ್ಲಿ ಅವಕಾಶ ಇದೆ ಎಂದಿದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಎಸ್ಪಿ ಶೋಭಾ ರಾಣಿ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರೂಟಿನ್ನಂತೆ ಇಂದು ಕೂಡ ಜೈಲಿಗೆ ಭೇಟಿ ನೀಡಿದ್ದೇನೆ. ಕಾರಾಗೃಹದ ಅಧೀಕ್ಷಕರ ಕೊಠಡಿಗೆ ತೆರಳಿ ಮಾತನಾಡಿದ್ದೇನೆ. ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದರು.
ಇನ್ನು, ದರ್ಶನ್ ಕುರಿತ ವದಂತಿಗಳ ಬಗ್ಗೆ ಉತ್ತರಿಸಿ, ದರ್ಶನ್ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಕುರಿತ ವದಂತಿಗಳು ಸುಳ್ಳು. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ದರ್ಶನ್ ಅವರ ಕೈಗೆ ಬೇಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ, ದರ್ಶನ್ ಅವರಿಗೆ ಬೇಡಿ ಹಾಕಿಲ್ಲ. ಕೈಗೆ ನೋವಾಗಿರೋದ್ರಿಂದ ಬಟ್ಟೆ ಕಟ್ಟಿಕೊಂಡಿದ್ದರು. ಅದು ಬೇಡಿ ಅಲ್ಲ. ಜೊತೆಗೆ ಕೈಗೆ ಹಾಕಿದ್ದ ಕಡಗ, ದಾರ ಮತ್ತು ಚೈನ್ಗಳನ್ನು ಪರಿಶೀಲನೆ ವೇಳೆ ತೆಗೆಸಲಾಗಿದೆ ಎಂದು ತಿಳಿಸಿದರು.
ವಿಚಾರಾಧೀನ ಕೈದಿ ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು. ಆದರೆ ಶಿಕ್ಷೆಯಾಗಿರೋ ಕೈದಿಗೆ ಆ ರೀತಿಯಲ್ಲಿ ಅವಕಾಶ ಇರೋದಿಲ್ಲ. ಇನ್ನು ದರ್ಶನ್ ಅವರಿಗೆ ಊಟ ನೀಡಲಾಗಿದ್ದು, ಜೈಲಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ದರ್ಶನ್ ಅವರ ಭೇಟಿಗೆ ಅವಕಾಶ ನೀಡುವ ಕುರಿತು ಮಾತನಾಡಿದ ಅವರು, ಸಾಮಾನ್ಯವಾಗಿ ವಾರದಲ್ಲಿ ಒಂದು ದಿನ ಕುಟುಂಬಸ್ಥರು ಅಥವಾ ಆಪ್ತರ ಭೇಟಿಗೆ ಅವಕಾಶ ಇರುತ್ತದೆ. ಭೇಟಿಯಾಗುವವರು ತಮ್ಮ ಮಾಹಿತಿಯನ್ನು ಜೈಲಿನ ಅಧಿಕಾರಿಗಳಿಗೆ ನೀಡಬೇಕು. ಆಗ ಅಧಿಕಾರಿಗಳು, ಕೈದಿಗಳಿಗೆ ತಿಳಿಸಿ ಅವರು ಇಚ್ಛಿಸಿದರೆ ಒಂದು ಬಾರಿ ಭೇಟಿಗೆ ಅವಕಾಶ ನೀಡಲಾಗುತ್ತದೆ. ಆದರೆ ದರ್ಶನ್ ಅವರ ವಿಚಾರದಲ್ಲಿ ಕೋರ್ಟ್ ಆದೇಶದಲ್ಲಿ ಏನಿದೆ ಎಂಬುದು ನನ್ನ ಗಮನಕ್ಕಿಲ್ಲ. ಕೋರ್ಟ್ ಆದೇಶದಂತೆ ಅವಕಾಶ ನೀಡಲಾಗುತ್ತದೆ ಎಂದರು.