ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೈಲು ಸೇರಿದ್ದಾರೆ. ಆ ಬಳಿಕ ದರ್ಶನ್ ಬಗ್ಗೆ ಅನೇಕ ಆರೋಪಗಳು ಕೇಳಿ ಬರ್ತಿದೆ. ದರ್ಶನ್ ನಟ ಅಲ್ಲ ವಿಲನ್ ಎಂದು ಸಾಕಷ್ಟು ಮಂದಿ ಆರೋಪಗಳನ್ನು ಮಾಡ್ತಿದ್ದಾರೆ. ಈ ಮಧ್ಯೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ದರ್ಶನ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದರ್ಶನ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ರಾ ಅನ್ನೋ ಬಗ್ಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸುಳಿವು ಕೊಟ್ಟಿದ್ದಾರೆ. ದರ್ಶನ್ ಅವರನ್ನ ಕಾಂಗ್ರೆಸ್ನಿಂದ ನಿಲ್ಲಿಸಲು ಡಿಕೆ ಬ್ರದರ್ಸ್ ಸಿದ್ಧತೆ ನಡೆಸಿದ್ದರು ಎಂದಿದ್ದಾರೆ.
ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಹಾಕ್ತೇವೆ ಎಂದಿದ್ದ ಡಿ.ಕೆ ಸುರೇಶ್ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನವರ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನ ಕಾಂಗ್ರೆಸ್ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ ಬ್ರದರ್ಸ್ ಪ್ಲ್ಯಾನ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನೀವೆ ಊಹೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ದರ್ಶನ್ ಸ್ಪರ್ಧೆಗೆ ಬಯಸಿದ್ದರು ಅನ್ನೋ ಸುಳಿವು ನೀಡಿದ್ದಾರೆ.
ಇನ್ನೂ ದರ್ಶನ್ ಮೇಲಿನ ಕೊಲೆ ಆರೋಪ ಕುರಿತು ಮಾತನಾಡಿದ ಅವರು, ಈ ವಿಚಾರವನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೊಂದು ವಿಚಿತ್ರ ಕೇಸ್ ಅನ್ನಿಸ್ತಿದೆ. ಪಾಪ ಅವರಿಗೆ ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ. ಆದರೆ ಈ ರೀತಿ ಅನಾಹುತ ಆಗೋಗಿದೆ. ಮುಂದೆ ಏನಾಗುತ್ತೋ ನೋಡೊಣ ಎಂದು ಹೇಳಿದರು.