ಇಂದು ಬೆಳಗ್ಗೆ ಸ್ಯಾಂಡಲ್ ವುಡ್ ಸಿನಿಮಾ ರಂಗದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿಧನರಾಗಿದ್ದಾರೆ. ಕಾಕತಾಳೀಯ ಎಂಬಂತೆ ಪತ್ನಿ ನಿಧನರಾದ ದಿನವೇ ದ್ವಾರಕೀಶ್ ಕೂಡ ಕೊನೆಯುಸಿರು ಎಳೆದಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ 16 ಜುಲೈ 2021ರಂದು ನಿಧನರಾಗಿದ್ದರು. ದ್ವಾರಕೀಶ್ ಕೂಡ ಇದೇ ದಿನ ಮೃತಪಟ್ಟಿದ್ದಾರೆ. ಮುಂಜಾನೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಉಸಿರು ನಿಲ್ಲಿಸಿದ್ದರು ಎಂದು ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ.
ಮೊದಲ ಪತ್ನಿ ಅಂಬುಜಾ ಅವರು ದ್ವಾರಕೀಶ್ ದೂರದ ಸಂಬಂಧಿ. ಚಿತ್ರದುರ್ಗ ಅವರ ಊರಾಗಿತ್ತು. ಅಂಬುಜನಾ ಪ್ರೀತಿಸುತ್ತಿದ್ದರು ದ್ವಾರಕೀಶ್. ಇದನ್ನು ಪತ್ರದ ಮೂಲಕ ಹೇಳಿಕೊಂಡಿದ್ದರು. ದ್ವಾರಕೀಶ್ ಪ್ರೀತಿಯನ್ನು ಅವರು ಒಪ್ಪಿದ್ದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಅಂಬುಜಾ ಬಳಿ ಹೇಳಿಕೊಂಡಿದ್ದರು ದ್ವಾರಕೀಶ್. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅಂಬುಜಾ. ಮದುವೆ ಆದ ಬಳಿಕ ದ್ವಾರಕೀಶ್ ಅವರ ಸಣ್ಣ ಸಣ್ಣ ಆಸೆಯನ್ನೂ ಅಂಬುಜಾ ಈಡೇರಿಸುತ್ತಿದ್ದರಂತೆ. ದಯಾನಂದ ಕಾಲೇಜಿನಲ್ಲಿ ಅಂಬುಜಾ ಪ್ರೊಫೆಸರ್ ಆಗಿದ್ದರು. 62 ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದ್ವಾರಕೀಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 19 ಆಗಷ್ಟ್ 1942ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ ದ್ವಾರಕೀಶ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದ ದ್ವಾರಕೀಶ್, 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದರು. ದ್ವಾರಕೀಶ್ ತಮ್ಮ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಅವರ ಮೂಲಕ 1964ರಲ್ಲಿ ‘ವೀರ ಸಂಕಲ್ಪ’ ಚಲನಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.