ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಸಿನಿಮಾಗಳ ಜೊತೆ ಜೊತೆಗೆ ರಾಜಕೀಯ ಜೀವನವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಮಧ್ಯೆ ಜಗ್ಗೇಶ್ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಕೆಲಸ ಆಗುತ್ತಿದೆ. ಇಂಥವರ ವಿರುದ್ಧ ಜಗ್ಗೇಶ್ ಕೋರ್ಟ್ ಮೊರೆ ಹೋಗಿದ್ದು, ತಮ್ಮ ವಿರುದ್ಧ ಅವಹೇಳನಾಕಾರಿ ಸುದ್ದಿ ಪ್ರಕಟ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಜಗ್ಗೇಶ್ ಅಭಿಮಾನಿಗಳ ಜೊತೆ ಸದಾ ಟಚ್ ನಲ್ಲಿದ್ದಾರೆ. ಜೊತೆಗೆ ತಮ್ಮ ಸಿನಿಮಾಗಳ ಬಗ್ಗೆ, ರಾಜಕೀಯ ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೇ ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ದಿದೆ. ಕೆಲವು ಸುದ್ದಿ ಮಾಧ್ಯಮಗಳು ಜಗ್ಗೇಶ್ ಅವರನ್ನು ಟೀಕಿಸಿದ್ದು, ಇದಕ್ಕೆ ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಸಿಟಿ ಸಿವಿಲ್ ಹಾಗೂ ಸೆಷನ್ ನ್ಯಾಯಾಲಯದ ಆದೇಶದ ಪ್ರಕಾರ ಜಗ್ಗೇಶ್ ವಿರುದ್ಧ ಸುದ್ದಿಯನ್ನು ಅಥವಾ ಪ್ರಮಾಣಿಕರಿಸದ ಸುದ್ದಿಯನ್ನು ಮಾನಹಾನಿ ಆಗುವ ರೀತಿಯಲ್ಲಿ, ಅವಹೇಳನಕಾರಿಯಾಗಿ ಬಿತ್ತರಿಸುವಂತಿಲ್ಲ. ಇದು ತಾತ್ಕಾಲಿಕ ಆದೇಶವಾಗಿದೆ. ಏಪ್ರಿಲ್ 25ಕ್ಕೆ ಮುಂದಿನ ವಿಚಾರಣೆ ಇದೆ. ಜಗ್ಗೇಶ್ ಪರ ವಕೀಲರು ಇದನ್ನು ಎಲ್ಲರ ಗಮನಕ್ಕೆ ತಂದಿದ್ದಾರೆ.