ಮಾರ್ಚ್ 17ಕ್ಕೆ ನಟ ಜಗ್ಗೇಶ್ ಹುಟ್ಟು ಹಬ್ಬ. ಈ ಬಾರಿಯ ಹುಟ್ಟು ಹಬ್ಬದ ವಿಶೇಷವೆಂದರೆ, ಜಗ್ಗೇಶ್ ಅವರಿಗೆ 60 ತುಂಬಲಿದೆ. ಪ್ರತಿ ಬಾರಿಯೂ ಅವರು ತಮ್ಮ ಹುಟ್ಟು ಹಬ್ಬವನ್ನು ಮಂತ್ರಾಲಯದ ಗುರು ರಾಯರ ಸನ್ನಿಧಿಯಲ್ಲಿ ಆಚರಿಸುತ್ತಾರೆ. ಹಾಗಾಗಿ ಹುಟ್ಟು ಹಬ್ಬದ ಮೂರು ದಿನದ ಮುಂಚೆಯೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ದೆಹಲಿಯ ಪಿಎಂ ನಿವಾಸದಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿರುವ ಜಗ್ಗೇಶ್, ಆ ಭೇಟಿಗೆ ವಿಶೇಷ ಅರ್ಥವೊಂದನ್ನೂ ನೀಡಿದ್ದಾರೆ. ‘ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕಿರಿಯ ಪುತ್ರ ಯತಿರಾಜ್, ಪತ್ನಿ ಪರಿಮಳಾ ಜಗ್ಗೇಶ್ ಜೊತೆ ಪ್ರಧಾನಿಯನ್ನು ಭೇಟಿ ಮಾಡಿ, ಮಂತ್ರಾಲಯದಿಂದ ತೆಗೆದುಕೊಂಡು ಹೋಗಿದ್ದ ರಾಯರ ವಿಗ್ರಹ ಮತ್ತು ವಿಶೇಷ ಶಾಲನ್ನು ಮೋದಿಗೆ ಅರ್ಪಿಸಿದ್ದಾರೆ ಜಗ್ಗೇಶ್. ಮೋದಿ ಕೂಡ ಜಗ್ಗೇಶ್ ಪುತ್ರನ ಹಾಗೂ ಪತ್ನಿಯ ಜೊತೆ ಸಲುಗೆಯಿಂದಲೇ ಮಾತನಾಡಿದ್ದಾರೆ. ಆ ಫೋಟೋಗಳನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.