ನಟ ಕಿಚ್ಚ ಸುದೀಪ್ ಅವರನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಈ ಭಾರಿ ಸುದೀಪ್ ರಾಜಕೀಯಕ್ಕೆ ಬರ್ತಾರೆ ಎಂದೇ ಹೇಳಲಾಗಿತ್ತು. ಆದರೆ ಇದೀಗ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡುವುದಾಗಿ ಸುದೀಪ್ ಬಹಿರಂಗವಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಯಾವುದೇ ಪಕ್ಷದ ಟಿಕೆಟ್ ಕೇಳಿಯೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ. ಆದರೆ, ನನಗೆ ಬೆಂಬಲ ನೀಡಿದವರ, ನನ್ನ ಏಳಿಗೆಗೆ ಕಾರಣರಾವದರ ಪರವಾಗಿ ಪ್ರಚಾರ ಮಾಡುತ್ತೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಅಂಥವರಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಕೂಡ ಒಬ್ಬರು. ಅವರನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನಾನು ಅವರ ಪರವಾಗಿ ನಿಲ್ಲಲಿದ್ದೇನೆ ಎಂದು ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದರು. ನಾನು ಹೇಳಿದ ಕಡೆ ನಟ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.
ಈ ಹಿಂದೆ 2018ರ ಚುನಾವಣೆಯಲ್ಲಿಯೂ ಸುದೀಪ್ ಅವರು ಕೆಲವು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.