ನಟ, ಹಿಂದೂಪುರಂ ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಅರಾಧಿಸುತ್ತಾರೆ. ಅವರ ಸಿನಿಮಾಗಳು ತೆರೆಗೆ ಬಂದರೆ ಹಬ್ಬದಂತೆ ಸಂಭ್ರಮಿಸುತ್ತಾರೆ. ಆದರೆ ಅದೆಷ್ಟೋ ಭಾರಿ ಕೆಲ ನಟ, ನಟಿಯರು ತಮ್ಮ ಅಭಿಮಾನಿಗಳ ಮೇಲೆ ಗರಂ ಆಗುತ್ತಾರೆ. ಅಂತೆಯೇ ತೆಲುಗು ನಟ ನಂದಮೂರಿ ಬಾಲಕೃಷ್ಣ ಸಾಕಷ್ಟು ಭಾರಿ ಅಭಿಮಾನಿಗಳ ಮೇಲೆ ಗರಂ ಆಗಿದ್ದು ಅಂತೆಯೇ ಈ ಭಾರಿಯೂ ಅಭಿಮಾನಿಗಳ ಮೇಲೆ ತಿರುಗಿ ಬಿದ್ದಿದ್ದಾರೆ.
ಬಾಲಕೃಷ್ಣ ಅವರು ತಮ್ಮ ಸಿನಿಮಾ ಬಿಡುಗಡೆ ಕಾರ್ಯಕ್ರಮಗಳು, ರಾಜಕೀಯ ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಅನೇಕ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಕೆಲವರು ಮಾಡುವ ಕಿಡಿಗೇಡಿತ ಬಾಲಯ್ಯ ಅವರ ಸಿಟ್ಟಿಗೆ ಕಾರಣವಾಗುತ್ತೆ.
ಬಾಲಕೃಷ್ಣ ಅವರು ಎರಡು ದಿನಗಳ ಕಾಲ ಅನಂತಪುರ ಜಿಲ್ಲೆಯಲ್ಲಿ ಟಿಡಿಪಿ, ಜನಸೇನೆ ಮತ್ತು ಬಿಜೆಪಿ ಮೈತ್ರಿಕೂಟದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸ್ವರ್ಣಾಂಧ್ರ ಸರ್ಕಾರ ಯಾತ್ರೆ ಹೆಸರಿನಲ್ಲಿ ಅಭಿಯಾನ ಪಾಲ್ಗೊಳ್ಳಲಿದ್ದಾರೆ. ಇದರ ಅಂಗವಾಗಿ ಹೆಲಿಕಾಪ್ಟರ್ ನಲ್ಲಿ ಕದಿಗೆ ಬಂದಿಳಿದರು. ಈ ವೇಳೆ ಸ್ಥಳೀಯ ಮುಖಂಡರು ಹಾಗೂ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಅವರನ್ನು ಹತ್ತಿರದಿಂದ ನೋಡಲು ಪೈಪೋಟಿ ನಡೆಸಿದರು. ಜೊತೆಗೆ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಈ ವೇಳೆ ಬಾಲಯ್ಯ ಬಾಬು ತೀವ್ರ ಅಸಹನೆ ವ್ಯಕ್ತಪಡಿಸಿದರು. ಅಭಿಮಾನಿಯೊಬ್ಬರು ಅವರ ಮೇಲೆ ಕೈ ಹಾಕಲು ಪ್ರಯತ್ನಿಸಿದಾಗ, ತಕ್ಷಣ ಎಚ್ಚರಿಸಿದರು ಮತ್ತು ಮೊಣಕೈ ನೂಕಿ ದೂರವಿರುವಂತೆ ಕೈ ಬೀಸಿದರು. ಸಧ್ಯ ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.