ಬೆಂಗಳೂರು: ನಟ, ರಾಜಕಾರಣಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶರಾಗಿದ್ದಾರೆ. ನಿನ್ನೆ ಕಾರ್ಡಿಯಕ್ ಅರೆಸ್ಟ್ ಆಗಿದ್ದು ನಗರದ ಎಚ್ ಸಿ ಜಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದರು ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಏಪ್ರಿಲ್ 6, 1953 ರಂದು ಜನಸಿದ ಕೆ. ಶಿವರಾಮು 1985 ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ಬಳಿಕ ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು, ತೇರ್ಗಡೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಲ್ಲದೇ ಇಂದು ಬೆಳಗ್ಗೆ ಮಾಜಿ ಸಿಎಂ ಯಡಿಯೂರಪ್ಪನವರು ಆಸ್ಪತ್ರೆಗೆ ಭೇಟಿ ನೀಡಿ ಅವರು ಮಾತನಾಡೋ ಪರಿಸ್ಥಿತಿಯಲ್ಲಿ ಇಲ್ಲ ಎಂದ ಬಿ.ಎಸ್ ಯಡಿಯೂರಪ್ಪ ಅವರು ತುಂಬಾ ಭಾವುಕರಾಗಿದ್ದರು.
ಕೆ ಶಿವರಾಮ್ ಐಎಎಸ್ ಅಧಿಕಾರಿಯಾಗಿದ್ದರು. ಕನ್ನಡದಲ್ಲೇ ಪರೀಕ್ಷೆ ಬರೆದು ಐಎಎಸ್ ಪಾಸ್ ಮಾಡಿದ ಕೀರ್ತಿ ಅವರಿಗಿತ್ತು. ಬಳಿಕ ಸಿನಿಮಾ ಕ್ಷೇತ್ರದ ಆಸಕ್ತಿಯಿಂದ ಸರ್ಕಾರಿ ಸೇವೆಗೆ ವಿದಾಯ ಹೇಳಿ ಸಿನಿಮಾದತ್ತ ಚಿತ್ತ ನೆಟ್ಟರು.
2013 ರಲ್ಲಿ ಐಎಎಸ್ ನಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ ಶಿವರಾಮ್, 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಸದ್ಯ ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದು ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದರು
1993 ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದ ಕೆ ಶಿವರಾಮ್ , ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ಟೈಗರ್’ ಮುಂತಾದ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.