ರಮೇಶ್ ಅರವಿಂದ್ ನಿರೂಪಣೆಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಅತಿಥಿಯಾಗು ನಟ ಪ್ರಭುದೇವ್ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ತಮ್ಮ ಬದುಕಿನ ಬಾಲ್ಯದ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಭುದೇವ ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್ನಿಂದ ಅವರ ಭವಿಷ್ಯ ಬದಲಾಗಿದ್ದು, ಹೇಗೆ? ಎಂದು ಹೇಳಿದ್ದಾರೆ.
ಬಾಲ್ಯದಿಂದಲೇ ನೃತ್ಯ ರಂಗದಲ್ಲಿ ಪ್ರಭುದೇವಗೆ ಒಲವಿತ್ತು. ಹಾಗಾಗಿ ಭರತನಾಟ್ಯ ಸೇರಿದಂತೆ ಹಲವು ಶೈಲಿಯ ನೃತ್ಯವನ್ನ ಕರಗತ ಮಾಡಿಕೊಂಡಿದ್ದರು. ಪ್ರಭುದೇವ ನೃತ್ಯ ಕಲಿಯುವಾಗ ಅವರಿಗೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್ ಸಿಕ್ಕಿತ್ತು. ವಿಶ್ವಪ್ರಸಿದ್ಧ ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ 1982ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಪ್ರಭುದೇವ ಅವರು ಆ ಆಲ್ಬಂನ ವಿಸಿಆರ್ ಕ್ಯಾಸೆಟ್ ಅನ್ನು ತೆಗೆದುಕೊಂಡು ಅದನ್ನು ನೋಡಲು ವಿಸಿಆರ್ ಅನ್ನು ಬಾಡಿಗೆ ತಂದಿದ್ದರಂತೆ. ಆ ಕ್ಯಾಸೆಟ್ ನೋಡುತ್ತಲೇ ನನಗೆ ರೋಮಾಂಚನವಾಗಿ ಬಿಟ್ಟಿತು. ನಾನು ಹೊಸದೇನನ್ನೋ ನೋಡಿದೆ. ಅಲ್ಲಿಯವರೆಗೆ ನಾನು ಆ ರೀತಿಯ ಡ್ಯಾನ್ಸ್ ನೋಡಿರಲೇ ಇಲ್ಲ. ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡಿದ ರೀತಿ ನನ್ನನ್ನು ಬೆರಗಾಗಿಸಿತು ಎಂದು ನೆನಪಿಸಿಕೊಂಡಿದ್ದಾರೆ.
ಅಂದು ಮೈಕಲ್ ಜಾಕ್ಸನ್ರ ಥ್ರಿಲ್ಲರ್ ನೋಡಿದ ಬಳಿಕ ಆ ರೀತಿಯ ಡ್ಯಾನ್ಸ್ ನನ್ನನ್ನು ಕಾಡಲು ಆರಂಭಿಸಿತು. ನಾನು ಎಲ್ಲಿದ್ದರು ಏನು ಮಾಡುತ್ತಿದ್ದರೂ ಡ್ಯಾನ್ಸ್ ಮಾಡಲು ಆರಂಭಿಸಿದೆ. ಒಂದು ರೀತಿ ಡ್ಯಾನ್ಸ್ ಗೆ ಹುಚ್ಚನಾಗಿಬಿಟ್ಟಿದ್ದೆ. ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದೆ. ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ನನ್ನ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು ಎಂದು ನೆನಪು ಮಾಡಿಕೊಂಡರು.