ಬಹುಭಾಷಾ ನಟ ಪ್ರಭು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಅವರನ್ನು ಚೆನ್ನೈನ ಮೆಡ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಮಿಂಚುತ್ತಿರುವ ಪ್ರಭು ನಟ, ಪೋಷಕ ನಟನಾಗಿ ಛಾಪು ಮೂಡಿಸಿದ್ದಾರೆ. ಖ್ಯಾತ ನಟ ಶಿವಾಜಿ ಗಣೇಶನ್ ಪುತ್ರ ಪ್ರಭು ಅವರು ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಚೆನ್ನೈನ ಮೆಡ್ವೇ ಆಸ್ಪತ್ರೆಗೆ ದಾಖಲಾಗಿರುವ ನಟ ಪ್ರಭು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಪಾಸಣೆಯ ಬಳಿಕ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗಿದೆ. ಅವರಿಗೆ ಲೇಸರ್ ಎಂಡೋಸ್ಕೋಪಿ ಸಹ ಮಾಡಲಾಗಿದ್ದು, ಸದ್ಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಆಸ್ಪತ್ರೆಯ ಹೆಲ್ತ್ ಅಪ್‌ಡೇಟ್ ಬಂದಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಅವರು ಕೆಲ ದಿನಗಳ ಕಾಲ ವಿಶ್ರಾಂತಿಯನ್ನ ಪಡೆಯಲಿದ್ದಾರೆ. ಒಂದೆರಡು ದಿನಗಳಲ್ಲಿ ನಟ ಪ್ರಭು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.