‘ಬಾಸಿಸಂ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು’ ಎಂಬ ವಾಕ್ಯ ಈಗ ಸೆನ್ಸೇಷನ್ ಸೃಷ್ಟಿ ಮಾಡಿದೆ. ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಹಿಟ್ ಆಗಿದ್ದು ಈ ಖುಷಿಯಲ್ಲಿ ಚಿತ್ರತಂಡ ಸುದೀಪ್ ಮನೆಯಲ್ಲಿ ಸೆಲೆಬ್ರೇಷನ್ ಮಾಡಿದೆ. ಈ ವೇಳೆ ಕಟ್ ಮಾಡಿದ ಕೇಕ್ನಲ್ಲಿ ಬಾಸಿಸಂ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಎಂದು ಬರೆಯಲಾಗಿತ್ತು. ಇದನ್ನು ನೋಡಿ ಹಲವರು ಹಲವು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾಕ್ಯದ ಮೂಲಕ ಬೇರೆ ನಟರಿಗೆ ಟಾಂಗ್ ಕೊಡಲಾಗಿದೆಯಾ ಎಂಬ ಅನುಮಾನ ಕೂಡ ಮೂಡಿದೆ. ಈ ಎಲ್ಲ ಪ್ರಶ್ನೆಗಳಿಗೆ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಿದ್ದು, ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಸುದೀಪ್ ಮತ್ತೆ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರರಂಗದಲ್ಲಿ ಇರುವ ಸುದೀಪ್ ಅವರ ಆಪ್ತ ಬಳಗದವರು ಕೂಡ ಈ ಸಿನಿಮಾಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಮೊದಲ ದಿನ ಹೌಸ್ಫುಲ್ ಆದ ಬಳಿಕ ಪ್ರದೀಪ್ ಮುಂತಾದವರು ಸಂಭ್ರಮಿಸಿದರು. ಆ ಸಂಭ್ರಮಾಚರಣೆಗೆ ಸಿದ್ಧವಾಗಿದ್ದೇ ಈ ಕೇಕ್ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು.
‘ಸಿನಿಮಾ ನೋಡಿದ ಮೇಲೆ ತುಂಬ ಇಷ್ಟ ಆಯಿತು. ಹಾಗಾಗಿ ವಿಶ್ ಮಾಡಲು ಸುದೀಪಣ್ಣ ಅವರ ಮನೆಗೆ ನಾನು ರಾತ್ರಿ ಹೋಗಿದ್ದೆ. ಹೋಗುವ ದಾರಿಯಲ್ಲಿ ನಾನು ಆ ಕೇಕ್ ತೆಗೆದುಕೊಂಡು ಹೋಗಿದ್ದೆ. ಅದರ ಮೇಲೆ ಬರೆದ ಲೈನ್ಸ್ಗೆ ಅನಗತ್ಯವಾಗಿ ಬೇರೆ ನಟರನ್ನು ಲಿಂಕ್ ಮಾಡಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಹಾಗಾಗಿ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ಪ್ರದೀಪ್ ಹೇಳಿದ್ದಾರೆ.
‘ಯಾವ ನಟನಿಗೂ ಹೋಲಿಕೆ ಮಾಡಿ ಕೇಕ್ ಮೇಲೆ ಅದನ್ನು ಬರೆದಿಲ್ಲ. ಮ್ಯಾಕ್ಸ್ ಸಿನಿಮಾದ ಹಾಡಿನಲ್ಲಿ ಲೈನ್ ಬರುತ್ತದೆ. ಮ್ಯಾಕ್ಸೇ ಮ್ಯಾಕ್ಸಿಮಮ್ ಮಾಸ್. ಮಾಸಲಿ ಮಾಸಿಗೇ ಬಾಸ್ ಎಂಬ ಸಾಲನ್ನೇ ಅನುವಾದಿಸಿ ಕೇಕ್ ಮೇಲೆ ಬರೆಸಲಾಗಿತ್ತು. ಪ್ರತಿ ನಟರಿಗೆ ತಮ್ಮದೇ ಆದ ಫ್ಯಾನ್ಸ್ ಬಳಗ ಇರುತ್ತೆ. ಅವರು ತಮ್ಮ ಹೀರೋಗೆ ಬಾಸ್, ಅಣ್ಣ, ಸರ್ ಎಂದೆಲ್ಲ ಕರೆಯುತ್ತಾರೆ. ಒಂದು ಪದ ಯಾವ ನಟನಿಗೂ ಸೀಮಿತ ಆಗಿರುವುದಿಲ್ಲ. ಯಾವ ನಾಯಕ ನಟನನ್ನೂ ಉದ್ದೇಶಿಸಿ ಬರೆದ ಸಾಲು ಅದಲ್ಲ’ ಎಂದು ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ.
‘ಸೋಶಿಯಲ್ ಮೀಡಿಯಾದಲ್ಲಿ ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಯಾರಿಗೂ ವೈಯಕ್ತಿಕವಾಗಿ ಮಾಡಿರುವಂಥದ್ದಲ್ಲ. ಕನ್ನಡ ಚಿತ್ರರಂಗ ಅದ್ಭುತವಾದ ಕುಟುಂಬ. ಡಿಸೆಂಬರ್ನಲ್ಲಿ ಬಂದ ಯುಐ, ಮ್ಯಾಕ್ಸ್ ಸಿನಿಮಾಗಳು ಅದ್ಭುತ ಪ್ರದರ್ಶನ ಕಂಡಿವೆ. ಕನ್ನಡ ಚಿತ್ರರಂಗದಲ್ಲಿ ಯಾವ ನಟನೂ ಇನ್ನೊಬ್ಬ ನಟನಿಗೆ ಟಾಂಟ್ ಕೊಡುವ ಪರಿಸ್ಥಿತಿ ಬಂದಿಲ್ಲ’ ಎಂದು ನಟ ಪ್ರದೀಪ್ ಹೇಳಿದ್ದಾರೆ.