ಬೆಂಗಳೂರು:ಶಾಂತಿ ನಗರದ ಸೇಂಟ್ ಜೋಸೆಫ್ ಶಾಲೆಯ ಮತಗಟ್ಟೆಯಲ್ಲಿಂದು ನಟ ಪ್ರಕಾಶ್ ರಾಜ್ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, “ನಾವು ಕೋಮುವಾದಿ ರಾಜಕಾರಣದ ವಿರುದ್ಧ ಮತ ಚಲಾಯಿಸಬೇಕು. ಕರ್ನಾಟಕ ಸುಂದರವಾಗಿರುವುದು ಮುಖ್ಯ” ಎಂದರು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಮತಗಟ್ಟೆಗಳ ಮುಂದೆ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಜನ ಆಗಮಿಸಿದ್ದರು. ಉತ್ಸಾಹದಿಂದ ಮತದಾನ ನಡೆಯುತ್ತಿದೆ.
ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 13ರಂದು ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಕಣದಲ್ಲಿ 2615 ಅಭ್ಯರ್ಥಿಗಳಿದ್ದಾರೆ. 2429 ಪುರುಷ, 185 ಮಹಿಳಾ, 1 ತೃತೀಯ ಲಿಂಗಿ, 918 ಪಕ್ಷೇತರರು ಇದ್ದಾರೆ. ಇದರಲ್ಲಿ ಮೂರು ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಸಕಲ ಪ್ರಯತ್ನ ಮಾಡಿವೆ. ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಹೈಕಮಾಂಡ್ಗಳನ್ನು ಪ್ರಚಾರಕ್ಕೆ ಇಳಿಸಿ ಮತಬೇಟೆ ಮಾಡಿದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಅಬ್ಬರದ ಮತಬೇಟೆ ನಡೆಸಿದೆ