ಬೆಂಗಳೂರು: ಡ್ರಗ್ಸ್ ಗಾಗಿ ಪೆಡ್ಲರ್ ಗಳ ಜೊತೆ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸ್ಯಾಂಡಲ್ ವುಡ್ ನಟ, ನಿರ್ಮಾಪಕ ಟಿ.ಚಂದ್ರಶೇಖರ್ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಹೀಗೊಂದು ದಿನ’ ಹಾಗೂ ‘ಅಪ್ಪುಗೆ’ ಎಂಬ ಎರಡು ಚಿತ್ರಗಳ ನಿರ್ಮಾಪಕರಾಗಿರುವ ಚಂದ್ರಶೇಖರ್ ಇದೀಗ ಹೆಂಡತಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೇಲ್ನೋಟಕ್ಕೆ ಇದು ಕೌಟುಂಬಿಕ ಸಮಸ್ಯೆ ಎನಿಸಿದರು, ಹೆಂಡತಿಯ ವಿರುದ್ಧ ಚಂದ್ರಶೇಖರ್ ಗುರುತರ ಆರೋಪ ಮಾಡಿದ್ದಾರೆ.
ಪತ್ನಿ ಡ್ರಗ್ ವ್ಯಸನಿಯಾಗಿದ್ದು, ಡ್ರಗ್ಸ್ ಗಾಗಿಯೇ ಆಕೆ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂದು ಚಂದ್ರಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘ನನ್ನ ಹೆಂಡತಿಯಾದ ನಮಿತಾರನ್ನು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನ್ನ ಹೆಂಡತಿಯೊಂದಿಗೆ ವಾಸವಾಗಿರುತ್ತೇನೆ. ನಮಗೆ ಮಕ್ಕಳು ಇರುವುದಿಲ್ಲ. ನನ್ನ ಹೆಂಡತಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ವ್ಯಸನಿಯಾಗಿದ್ದು, ಅದನ್ನು ಬಿಡಿಸಲು ಬಹಳ ಸಾರಿ ಪ್ರಯತ್ನ ಪಟ್ಟಿರುತ್ತೇನೆ. ಆದರೂ ಕದ್ದು ಮುಚ್ಚಿ ಆಕೆ ಸೇವನೆ ಮಾಡುತ್ತಿರುತ್ತಾಳೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಇತ್ತೀಚೆಗೆ ಜನವರಿಯಿಂದ ಲಕ್ಷ್ಮೀ ಶ್ ಪ್ರಭು ಎಂಬ ಡ್ರಗ್ ಪೆಡ್ಲರ್ ನೊಂದಿಗೆ ಪತ್ನಿ ಸ್ನೇಹ ಬೆಳೆಸಿಕೊಂಡು ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾಳೆ. ಅದಕ್ಕೆ ಸಂಬಂಧಪಟ್ಟಂತೆ ಸಾಕ್ಷಿಗಳು ನನಗೆ ಸಿಕಿದ್ದು, ನಾನು ನನ್ನ ಹೆಂಡತಿಗೆ ಬುದ್ದಿ ಹೇಳಿರುತ್ತೇನೆ. ಆದರೂ ನನ್ನ ಮಾತನ್ನು ಆಕೆ ತಿರಸ್ಕಾರ ಮಾಡಿ, ಅವನೊಂದಿಗೆ ಕದ್ದು ಮುಚ್ಚಿ ಸಂಬಂಧವಟ್ಟು ಇಟ್ಟುಕೊಂಡಿರುತ್ತಾಳೆ. ಅವನು ಮಾದಕ ವಸ್ತಗಳನ್ನು ಕೊಡುತ್ತಿರುತ್ತಾನೆ’ ಎಂದು ದೂರಿನಲ್ಲಿ ಬರೆದಿದ್ದಾರೆ.
ಹೆಂಡತಿ ಮತ್ತು ಆಕೆಯ ಪ್ರಿಯಕರ ತಮ್ಮ ಮೇಲೆ ಹಲ್ಲೆ ಮಾಡಿದ್ದನ್ನೂ ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಶೇಖರ್, ‘ಜೂನ್ 16ರ ಮಧ್ಯಾಹ್ನ 12.30 ಗಂಟೆಯಲ್ಲಿ ನಾನು ಇಲ್ಲದ ಸಮಯದಲ್ಲಿ ಲಕ್ಷ್ಮೀಶ್ ಪ್ರಭುವನ್ನು ಮನೆಗೆ ಕರೆಯಿಸಿಕೊಂಡು ಅವನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾಳೆ. ಈ ವೇಳೆ ನಾನು ಆಕೆಯನ್ನು ಪ್ರತ್ಯಕ್ಷವಾಗಿ ನೋಡಿ ನನ್ನ ಹೆಂಡತಿಯನ್ನು ಕೇಳಿದೆ. ಆಗ ನನ್ನ ಹೆಂಡತಿ ಹಾಗೂ ಅವಳ ಪ್ರಿಯಕರ ನನ್ನ ಕೈ ಕಾಲು ಹಿಡಿದುಕೊಂಡು ರಕ್ತ ಬರುವಂತೆ ಹೊಡೆದಿರುತ್ತಾರೆ. ನನ್ನ ಹೆಂಡತಿ ನನ್ನನ್ನು ಹಿಡಿದುಕೊಂಡು ಅವಳ ಪ್ರಿಯಕರ ನನ್ನ ಮೇಲೆ ಚಾಕುವಿನಿಂದ ಹಲ್ಲೇ ಮಾಡಿರುತ್ತಾರೆ’ ಎಂದು ದೂರಿನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.
ಪತಿಯ ದೂರಿಗೆ ಮರು ದೂರು ನೀಡಿರುವ ಪತ್ನಿ, ಮನೆಯಲ್ಲಿ ಡ್ರಗ್ ಇಟ್ಟು ಅರೆಸ್ಟ್ ಮಾಡಿಸ್ತಿನಿ ಎಂದು ಪತಿ ಚಂದ್ರಶೇಖರ್ ಬೆದರಿಕೆ ಹಾಕಿದ್ದಾರೆ. ಅಷ್ಟಲ್ಲದೆ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಿದ್ದಲ್ಲದೆ ಚಾಕುವಿನಿಂದ ತನ್ನ ಮೇಲೆ ಕೂಡ ಹಲ್ಲೆ ನಡೆಸಿರೋದಾಗಿ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.