ನಟ ರವಿಚಂದ್ರನ್​ ತಾಯಿ ನಿಧನ;ಸಂತಾಪ ಸೂಚಿಸಿದ ಚಿತ್ರರಂಗ

ಚಲನಚಿತ್ರ

ಬೆಂಗಳೂರು: ಕನ್ನಡದ ಹಿರಿಯ ನಟ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್​ ವೀರಸ್ವಾಮಿ ಅವರು ಇಂದು ನಿಧನರಾಗಿದ್ದಾರೆ.  83 ವರ್ಷದ ವಯಸ್ಸಿನ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಪಟ್ಟಮ್ಮಾಳ್​ ವೀರಸ್ವಾಮಿ ಅವರು ಕೊನೆಯುಸಿರು ಎಳೆದಿದ್ದಾರೆ. ರವಿಚಂದ್ರನ್​ ತಾಯಿ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಪಟ್ಟಮ್ಮಾಳ್​ ವೀರಸ್ವಾಮಿ ಅವರನ್ನು ಫೆ.28ರ ಮುಂಜಾನೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6.30ರ ಸುಮಾರಿಗೆ ಅವರು ನಿಧನ ಹೊಂದಿದರು. ಬೆಳಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ರಾಜಾಜಿನಗರದ ನಿವಾಸಕ್ಕೆ ತರಲಾಗುತ್ತದೆ.

ಇಂದು ಸಂಜೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ರವಿಚಂದ್ರನ್​ ಕುಟುಂಬದವರು ತಿಳಿಸಿದ್ದಾರೆ. ರವಿಚಂದ್ರನ್​ ಅವರ ತಾಯಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ರವಿಚಂದ್ರನ್​ ಮಾತನಾಡಿದ್ದರು. ‘ಅಮ್ಮನಿಗೆ ಅಲ್ಜಮೈರ್​ ಆಗಿದೆ. ಎಲ್ಲರನ್ನೂ ಆಗಾಗ ಮರೆಯುತ್ತಾರೆ. ಆದರೆ ಯಾರನ್ನು ಮರೆತರೂ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವರು ಮರೆತಿಲ್ಲ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಅವಳಿಗೆ ಹ್ಯಾಟ್ಸ್​ ಆಫ್​ ಹೇಳಬೇಕು. ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ನನ್ನ ಹೆಂಡತಿ ಒಂದು ದಿನವೂ ಬೇಸರ ಮಾಡಿಕೊಂಡಿಲ್ಲ’ ಎಂದು ರವಿಚಂದ್ರನ್​ ಹೇಳಿದ್ದರು.

Leave a Reply

Your email address will not be published. Required fields are marked *