ಪ್ರಸ್ತುತ ಕಾಲಘಟ್ಟದಲ್ಲಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ತಲುಪುವುದು ಸವಾಲಿನ ಕೆಲಸವಾಗಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
‘ಕಾಂತಾರ’ ಸಿನಿಮಾ ನಂತರ ವಿಶ್ವಾದ್ಯಂತ ಸಂಚಲನ ಮೂಡಿಸಿದ ನಟ, ನಿರ್ದೇಶಕ, ಲೇಖಕ ಹಾಗು ನಿರ್ಮಾಪಕ ರಿಷಬ್ ಶೆಟ್ಟಿ ಅವರು, ಬೆಂಗಳೂರಿನ ಫಿಲ್ಮ್ ಸಿಟಿ ಸ್ಥಾಪಿಸುವಂತೆ ಸಾರ್ವಜನಿಕ ವೇದಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ.
ಭಾರತದ ಯುವ ಶಕ್ತಿಯು ರಾಷ್ಟ್ರದಾದ್ಯಂತ ಪರಿವರ್ತನೆಯ ಅಲೆಯನ್ನು ಹೇಗೆ ಹುಟ್ಟುಹಾಕುತ್ತಿದೆ ಎಂಬುದರ ಕುರಿತು ಬೆಳಕು ಚೆಲ್ಲಲು ಪ್ರಸಾರ ಮತ್ತು ಮಾಹಿತಿ ಸಚಿವಾಲಯವು ಆಯೋಜಿಸಿದ 9ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶಕ್ಕೆ ಪ್ಯಾನಲಿಸ್ಟ್ ಆಗಿ ರಿಷಬ್ ಅವರನ್ನು ಆಹ್ವಾನಿಸಲಾಗಿತ್ತು. ಇಲ್ಲಿ ರಿಷಬ್ ಶೆಟ್ಟಿ ಅವರು ಸಿನಿಮಾ ಉದ್ಯಮಕ್ಕೆ ಸರ್ಕಾರದಿಂದ ಹೇಗೆ ಬೆಂಬಲ ಸಿಗುತ್ತಿದೆ ಎಂಬುದರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವಂತೆ ವಿನಂತಿಸಿಕೊಂಡಿದ್ದಾರೆ.
ಸಮಾವೇಶದಲ್ಲಿ ಓಯೋ ರೂಮ್ಸ್ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್, ಪಟಿಯಾಲಾ ಘರಾನಾ ಸಂಗೀತಗಾರ ಅಮಾನ್ ಅಲಿ ಬಂಗಾಶ್, ಮಾಜಿ ಭಾರತೀಯ ಹಾಕಿ ಆಟಗಾರ ಮತ್ತು ರಾಷ್ಟ್ರೀಯ ನಾಯಕ, ವೀರೇನ್ ರಸ್ಕ್ವಿನ್ಹಾ, ಸಿಎಎಕ್ಸ್ಪರ್ಟ್ ಸಹ-ಸಂಸ್ಥಾಪಕ ಯಶೋಧರ ಬಜೋರಿಯಾ ಮತ್ತು ಬಾಕ್ಸರ್ ಅಖಿಲ್ ಕುಮಾರ್ ಹಾಜರಿದ್ದರು.