ಬಹುಭಾಷಾ ನಟ ಸಿದ್ಧಾರ್ಥ್ ಒಂದಲ್ಲ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಈ ಹಿಂದೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕುರಿತು ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಕೊನೆಗೆ ಸಿದ್ಧಾರ್ಥ್, ಸೈನಾ ನೆಹ್ವಾಲ್ಗೆ ಕ್ಷಮೆ ಕೇಳಿದರು. ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಿದ್ಧಾರ್ಥ್ ಕ್ಷಮೆ ಕೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಚಿತ್ರರಂಗದವರ ಬಳಿ ಮನವಿಯೊಂದನ್ನು ಮಾಡಿದ್ದರು. ಚಿತ್ರರಂಗದವರು ಸಿನಿಮಾದ ಟಿಕೆಟ್ ದರ ಹೆಚ್ಚಳ, ತೆರಿಗೆ ಇಳಿಕೆ ಇನ್ನಿತರೆ ವಿಷಯಗಳಿಗೆ ಸರ್ಕಾರದ ನೆರವು ಕೇಳುತ್ತಿರುತ್ತಾರೆ. ನೆರವು ನೀಡಲು ಸರ್ಕಾರವೂ ಸಿದ್ಧವಾಗಿದೆ. ಆದರೆ ಅದರ ಬದಲಿಗೆ ಚಿತ್ರರಂಗದವರೂ ಸಹ ನೆರವು ನೀಡಬೇಕು, ರಾಜ್ಯದಲ್ಲಿ ಡ್ರಗ್ಸ್ ಮಟ್ಟ ಹಾಕಲು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಚಿತ್ರರಂಗದ ನಟ-ನಟಿಯರು ಮಾಡಬೇಕು ಎಂದಿದ್ದರು.
ಸಿಎಂ ರೇವಂತ್ ರೆಡ್ಡಿಯವರ ಮನವಿಯನ್ನು ಟಾಲಿವುಡ್ನ ಹಲವು ನಟ-ನಟಿಯರು ಸ್ವಾಗತಿಸಿದ್ದರು. ತಾವು ಡ್ರಗ್ಸ್ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆ ನಿಲ್ಲುವುದಾಗಿ ಹೇಳಿದ್ದರು. ಆದರೆ ನಟ ಸಿದ್ಧಾರ್ಥ್, ಸಿಎಂ ಹೇಳಿಕೆಗೆ ಟಾಂಗ್ ನೀಡುವ ರೀತಿಯ ಹೇಳಿಕೊಂದನ್ನು ಹರಿಬಿಟ್ಟಿದ್ದರು. ‘ನಟರಲ್ಲಿ ಸಾಮಾಜಿಕ ಜವಾಬ್ದಾರಿ ಎನ್ನುವುದು ಅಂತರ್ಗವಾಗಿದೆ. ಅದನ್ನು ಅವರು ಮರೆತಿಲ್ಲ, ಸಿಎಂ ಅವರು ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ’ ಎಂದಿದ್ದರು. ಸಿದ್ಧಾರ್ಥ್ರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇದೀಗ ತಪ್ಪು ತಿದ್ದಿಕೊಂಡಿರುವ ನಟ ಸಿದ್ಧಾರ್ಥ್, ‘ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಅವರ ಸರ್ಕಾರದ ಕ್ರಮಗಳನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ನನ್ನ ಈ ಹಿಂದಿನ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ’ ಎಂದಿದ್ದಾರೆ.
ಸಿದ್ಧಾರ್ಥ್ ನಟನೆಯ ‘ಇಂಡಿಯನ್ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ತೆಲುಗಿಗೂ ಡಬ್ ಆಗಿದ್ದು ತೆಲುಗು ರಾಜ್ಯಗಳಲ್ಲಿಯೂ ಬಿಡುಗಡೆ ಆಗಲಿದೆ.