ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ನಾಲ್ಕು ವರ್ಷಗಳೇ ಕಳೆದಿದೆ. ಇದುವರೆಗೂ ಸುಶಾಂತ್ ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದು ಬಣದಿಲ್ಲ. ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದ್ದು ಇನ್ನೂ ಕಾರಣ ಬಹಿರಂಗವಾಗಿಲ್ಲ. ನಟನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದರೆ ಇದುವರೆಗೆ ಸತ್ಯಾಂಶ ಹೊರ ಬಂದಿಲ್ಲ.
ಈ ಮಧ್ಯೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಅವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಅನ್ನು ಆಸ್ಪತ್ರೆಯಲ್ಲಿ ಬದಲು ಮಾಡಲಾಗಿದೆ. ಇದನ್ನು ಆತ್ಮಹತ್ಯೆ ಎನ್ನುವಂತೆ ಬದಲಾಯಿಸಲಾಗಿದೆ. ಅಸಲಿಗೆ ಸುಶಾಂತ್ದು ಕೊಲೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ರೆಡ್ಡಿಟ್ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ಅವರು ಶುರು ಮಾಡಿದ್ದರು. ಸಾಮಾನ್ಯವಾಗಿ ಚಿತ್ರ ತಾರೆಯರು ತಮ್ಮ ಅಭಿಮಾನಿಗಳ ಜೊತೆ ಮಾತನಾಡಲು ಇದೊಂದು ಟ್ರೆಂಡ್ ಆಗಿದೆ. ಇದರಲ್ಲಿ ಸೋಮಿ ಅವರಿಗೆ ಸುಶಾಂತ್ ಸಿಂಗ್ ಪ್ರಶ್ನೆ ಕೇಳಿದಾಗ, ಈ ವಿಷಯವನ್ನು ಹೇಳಿದ್ದಾರೆ.
ಸುಶಾಂತ್ ಸಾವಿನ ಬಗ್ಗೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ಸೋಮಿ “ಅವರನ್ನು ಕೊಲೆ ಮಾಡಲಾಗಿದೆ. ಆದರೆ ಇದನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಎಲ್ಲಾ ರೀತಿಯ ಪ್ರಯತ್ನಗಳೂ ನಡೆದಿವೆ. ನಾನು ಹೇಳಿದ್ದರ ಬಗ್ಗೆ ಡೌಟ್ ಇದ್ದರೆ ಏಮ್ಸ್ ಡಾ. ಸುಧೀರ್ ಗುಪ್ತಾ ಹಾಗೂ ಅವರ ಪೋಸ್ಟ್ ಮಾರ್ಟಂ ರಿಪೋರ್ಟ್ ಬದಲಿಸಿದವರನ್ನು ಈ ಬಗ್ಗೆ ಕೇಳಿ ಎಂದು ನೇರಾನೇರವಾಗಿಯೇ ಹೇಳಿದ್ದಾರೆ. ಇದರಿಂದಾಗಿ ಮತ್ತೆ ಜಸ್ಟೀಸ್ ಫಾರ್ ಸುಶಾಂತ್ ಸಿಂಗ್ ಎನ್ನುವ ಹ್ಯಾಷ್ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ ಎಂದು ಇದಾಗಲೇ ಹಲವರು ನುಡಿದಿದ್ದಾರೆ. ಇವರ ಸಾವಿನ ನಂತರ ಚಿತ್ರರಂಗದಲ್ಲಿನ ಡ್ರಗ್ಸ್ ಮಾಫಿಯಾದ ಬಗ್ಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಹಲವಾರು ತಾರೆಗಳ ನೈಜ ಮುಖಗಳು ಬೆಳಕಿಗೆ ಬಂದರೂ, ಸುಶಾಂತ್ ಅವರ ಸಾವಿನ ನೈಜ ಚಿತ್ರಣ ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇವರದ್ದು ಆತ್ಮಹತ್ಯೆ ಎಂದು ಬಿಂಬಿತವಾಗಿದ್ದರೂ, ಇದು ಕೊಲೆ ಎಂಬ ಕುರಿತು ಸುಶಾಂತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು.
ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ರೂಪಕುಮಾರ್ ಶಾ ಆರೋಪಿಸಿದ್ದರು. ಸುಶಾಂತ್ ಶವ ಪತ್ತೆಯಾದಾಗ ಅವರ ದೇಹದ ಮೇಲೆ ಗಾಯಗಳಿದ್ದವು ಮತ್ತು ಅವರ ದೇಹವನ್ನು ಥಳಿಸಲಾಗಿತ್ತು ಎಂದಿದ್ದ ರೂಪಕುಮಾರ್ ಶಾ, ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುವಾಗ ನಾನು ಅಲ್ಲಿಯೇ ಇದ್ದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವೈದ್ಯರಿಗೆ ಹೇಳಿದ್ದೆ. ಆದರೆ ಯಾರೂ ನನ್ನತ್ತ ಗಮನ ಹರಿಸಲಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.