ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಲ್ಲಿಸಿದ ಬಳಿಕ ಸಾಕಷ್ಟು ನಟಿಯರು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಮಲಯಾಳಂ ಜೊತೆಗೆ ಪರಭಾಷೆಯ ನಟಿಯರು ತಮಗಾದ ಕೆಟ್ಟ ಅನುಭವಗಳ ಕುರಿತು ದೂರು ನೀಡುತ್ತಿದ್ದಾರೆ. ಇದೀಗ ಮುಂಬೈ ಮೂಲದ ಕಾದಂಬರಿ ಜೆತ್ವಾನಿ ಅವರು ಆಂಧ್ರ ಪ್ರದೇಶದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ಆ ಮೂವರನ್ನು ಅಮಾನತು ಮಾಡಲಾಗಿದೆ.
ಕಾದಂಬರಿ ಅವರು ಕನ್ನಡದಲ್ಲಿ ‘ಊಜಾ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲಿ ‘ಆಟ’, ಮಲಯಾಳಂನಲ್ಲಿ ‘ಐ ಲವ್ ಯೂ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಇದೀಗ ನಟಿ ತಮಗಾಧ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ತಮನ್ನು ಕಾನೂನು ಬಾಹೀರವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.
ಅಮಾನತುಗೊಂಡ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಪರಾಧವನ್ನು ದಾಖಲಿಸುವ ಮೊದಲೇ ನಟಿಯನ್ನು ಬಂಧಿಸಲು ಆದೇಶ ನೀಡಿದ್ದರು. ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸದೆ ಈ ಮೌಖಿಕ ಸೂಚನೆಗಳನ್ನು ಪಾಲಿಸಿದ್ದಕ್ಕಾಗಿ ಮತ್ತೋರ್ವ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಮತ್ತೋರ್ವ ಅಧಿಕಾರಿಯಿಂದಲೂ ಅಧಿಕಾರದ ದುರುಪಯೋಗ ಆಗಿರೋದು ಕಂಡು ಬಂದಿದೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ.
ಆಂಧ್ರಪ್ರದೇಶ ಪೊಲೀಸರಿಗೆ ಆನ್ಲೈನ್ ಮೂಲಕ ಕಾದಂಬರಿ ಅವರು ದೂರನ್ನು ದಾಖಲು ಮಾಡಿದ್ದರು. ಆ ಬಳಿಕ ಪೊಲೀಸ್ ಮಹಾನಿರ್ದೇಶಕ ದ್ವಾರಕಾ ತಿರುಮಲ ರಾವ್ ಅವರು ಈ ಕ್ರಮ ಕೈಗೊಂಡಿದ್ದಾರೆ. ಗೃಹ ಸಚಿವೆ ವಿ.ಅನಿತಾ ಅವರು ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿತ್ತು.
ಕಾದಂಬರಿ ವಿರುದ್ಧ ನಿರ್ಮಾಪಕ-ರಾಜಕಾರಣಿ ಫೋರ್ಜರಿ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ನಂತರ ಅವರನ್ನು ಬಂಧಿಸಿ ವಿಜಯವಾಡಕ್ಕೆ ತರಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಆರೋಪವನ್ನು ಅವರು ಅಲ್ಲಗಳೆದಿದ್ದರು. ‘ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ನಾನು ಫೈಲ್ ಮಾಡಿದ ಕೇಸ್ಗೆ ವಿರುದ್ಧವಾಗಿ ಅವರು ಈ ರೀತಿ ಕೇಸ್ ಹಾಕಿದ್ದಾರೆ. ಈ ನಿರ್ಮಾಪಕನಿಗೆ ಪೊಲೀಸರು ಬೆಂಬಲವಾಗಿ ನಿಂತಿದ್ದಾರೆ’ ಎಂದು ಕಾದಂಬರಿ ಹೇಳಿದ್ದರು.