ಸ್ಯಾಂಡಲ್ ವುಡ್ ಖ್ಯಾತ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ‘ಮನಸಾಲಜಿ’ ಹಾಗೂ ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ದೀಪಕ್ ಅರಸ್ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
42 ವರ್ಷ ವಯಸ್ಸಿನ ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಅರಸ್ ಅವರ ಸಾವಿನಿಂದಾಗಿ ಅಮೂಲ್ಯ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಬೆಂಗಳೂರಿನ ಆರ್ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಮೃತಪಟ್ಟಿದ್ದು, ಬಳಿಕ ವಯ್ಯಾಲಿಕಾವಲ್ ನ ನಿವಾಸಕ್ಕೆ ಮೃತ ದೇಹವನ್ನು ತರಲಾಗಿದೆ. ಇಂದು ಅವರ ಸ್ವಗ್ರಾಮ ನಾಗಮಂಗಲಕ್ಕೆ ಮೃತ ದೇಹ ತೆಗೆದುಕೊಂಡು ಹೋಗಿ ಅಲ್ಲೇ ಅಂತ್ಯ ಸಂಸ್ಕಾರ ಮಾಡುವ ಸಾಧ್ಯತೆ ಇದೆ.
ಅಮೂಲ್ಯ, ರಾಕೇಶ್ ಅಡಿಗ, ಸಾಧು ಕೋಕಿಲ ಮುಂತಾದವರು ನಟಿಸಿದ್ದ ‘ಮನಸಾಲಜಿ’ ಸಿನಿಮಾಗೆ ದೀಪಕ್ ಅರಸ್ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ 2011ರಲ್ಲಿ ಬಿಡುಗಡೆ ಆಗಿತ್ತು. ಬಳಿಕ ದೀಪಕ್ ಅವರು ಆ್ಯಕ್ಷನ್-ಕಟ್ ಹೇಳಿದ್ದು ‘ಶುಗರ್ ಫ್ಯಾಕ್ಟರಿ’ ಸಿನಿಮಾಗೆ. 2023ರ ನವೆಂಬರ್ನಲ್ಲಿ ‘ಶುಗರ್ ಫ್ಯಾಕ್ಟರಿ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸೋನಲ್ ಮಾಂತೆರೋ, ಅದ್ವಿತಿ ಶೆಟ್ಟಿ ಮುಂತಾದವರು ಅಭಿನಯಿಸಿದ್ದರು.