ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಕುಟುಂಬದ ಕಲಹ ಇದೀಗ ಬೀದಿಗೆ ಬಂದಿದೆ. ಟೆಲಿವಿಷನ್ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ತನ್ನ ಪತಿ ಪ್ರಶಾಂತ್ ಮೋಟ್ವಾನಿ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಪ್ರಶಾಂತ್ ತಾಯಿ ಮೋನಾ ಮೋಟ್ವಾನಿ ಹಾಗೂ ಸಹೋದರಿ ಹನ್ಸಿಕಾ ಮೋಟ್ವಾನಿ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ.
ಕೌಟುಂಬಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಮುಸ್ಕಾನ್, ಆಸ್ತಿ ವಿಚಾರದಲ್ಲೂ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಕಾಯ್ದೆ 498-ಎ, 323, 504, 506, ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ನನ್ನ ಪತಿ ನನಗೆ ಕಿರುಕುಳ ನೀಡುತ್ತಾರೆ. ದುಬಾರಿ ಗಿಫ್ಟ್ಗಳನ್ನು ನೀಡುವಂತೆ ಹಾಗೂ ಹಣವನ್ನು ನೀಡುವಂತೆ ಪೀಡಿಸುತ್ತಾರೆ ಎಂದು ಆರೋಪಿಸಿದ್ದಲ್ಲದೇ ಆಸ್ತಿ ವಿಚಾರದಲ್ಲಿ ನನಗೆ ಮೋಸ ಮಾಡಿದ್ದಾರೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸ್ಕಾನ್ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಪ್ರಕರಣ ದಾಖಲಾಗಿದೆ ಹೀಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದಿದ್ದಾರೆ.
2020ರಲ್ಲಿ ಮದುವೆಯಾಗಿದ್ದ ಮುಸ್ಕಾನ್ ಹಾಗೂ ಪ್ರಶಾಂತ್, 2022ರಲ್ಲಿ ಬೇರೆ ಬೇರೆಯಾಗಿದ್ದರು. ಅಂದಿನಿಂದ ಇಂದಿನವರೆಗೂ ಪ್ರಶಾಂತ್ ಆಗಲಿ ಅಥವಾ ಹನ್ಸಿಕಾ ಆಗಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಮುಸ್ಕಾನ್ ಜನಪ್ರಿಯ ಥೋಡಿ ಖುಷಿ ಥೋಡಿ ಗಮ್ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಮೊದಲ ಧಾರವಾಹಿಯಲ್ಲೇ ಬಹುದೊಡ್ಡ ಹೆಸರು ಮಾಡಿದರು.