ಕಳೆದ ಕೆಲ ದಿನಗಳಿಂದ ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ, ನಟ ಧನುಷ್ ಹಾಗೂ ಬಹುಭಾಷಾ ನಟಿ ಮೀನಾ ಮದುವೆಯ ವಿಷಯ ಸಖತ್ ಸದ್ದು ಮಾಡುತ್ತಿದೆ. ಈ ಸುದ್ದಿ ದೊಡ್ಡದಾಗಿ ವೈರಲ್ ಆಗುತ್ತಿದ್ದಂತೆ ನಟಿ ಮೀನಾ ಪ್ರತಿಕ್ರಿಯಿಸಿದ್ದು, ಧನುಷ್ ಜೊತೆಗಿನ ಮದುವೆ ಕುರಿತು ಮೌನ ಮುರಿದಿದ್ದಾರೆ.
ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಅವರು 2ನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಇತ್ತೀಚೆಗೆ ಪತ್ನಿ ಐಶ್ವರ್ಯ ರಜನಿಕಾಂತ್ ರಿಂದ ದೂರವಾಗಿರುವ ಕಾಲಿವುಡ್ ನಟ ಧನುಷ್ ಮೀನಾ ಜೊತೆ ಹಸೆಮಣೆ ಏರಲಿದ್ದಾರೆ ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬೈಲ್ವಾನ್ ರಂಗನಾಥನ್ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಮೀನಾ, ಹರಿಡಿರುವ ಗಾಸಿಪ್ ಶುದ್ಧ ಸುಳ್ಳು ಎಂದಿದ್ದಾರೆ. ನಾನಿನ್ನೂ ಪತಿಯನ್ನ ಕಳೆದುಕೊಂಡ ನೋವಿನಲ್ಲಿದ್ದೇನೆ. ಇಂತಹ ಸಮಯದಲ್ಲಿ ಎರಡನೇ ಮದುವೆಯ ಗಾಸಿಪ್ ಹಬ್ಬಿರುವುದು ತೀರಾ ಬೇಸರ ತರಿಸಿದೆ. ವಿದ್ಯಾಸಾಗರ್ ನಿಧನದ ನೋವನ್ನ ಅರಗಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಅಂಥದ್ರಲ್ಲಿ ಈ ತರಹದ ಗಾಸಿಪ್ ಹಬ್ಬಿದರೆ ತೀವ್ರ ನೋವುಂಟಾಗುತ್ತದೆ. ನನ್ನ ಗಮನ ಈಗ ಏನಿದ್ದರೂ ಮಗಳ ಭವಿಷ್ಯದ ಮೇಲೆ ಮಾತ್ರ. ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ವಿಚಾರದಲ್ಲೂ ನಾನು ಚ್ಯೂಸಿ ಆಗಿದ್ದೇನೆ ಎಂದು ಮೀನಾ ಪ್ರತಿಕ್ರಿಯಿಸಿದ್ದಾರೆ.