ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಪಿಎಚ್ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಬಹುಭಾಷಾ ನಟಿ ಪವಿತ್ರ ಲೋಕೇಶ್ ಸೇರಿದಂತೆ ೨೫೯ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿವಿಯಲ್ಲಿ ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ನಿಕಾಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ನಿಕಾಯಗಳಡಿ ಸಂಶೋಧನೆಗೆ ಆಸಕ್ತಿ ತೋರಿ ೯೮೧ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು.
ಆ ಪೈಕಿ ೨೫೯ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕನ್ನಡ ವಿವಿ ಕುಲಸಚಿವ ಡಾ.ಸುಬ್ಬಣ್ಣ ರೈ ಮಾಹಿತಿ ನೀಡಿದರು. ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತ ಕೇಂದ್ರ, ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ. ನಟಿ ಪವಿತ್ರಾ ಲೋಕೇಶ ಅವರು ಭಾಷಾ ನಿಕಾಯದಡಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು. ಕಳೆದ ಮೇ ೩೦ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.”