ಕಿರುತೆರೆ ನಟಿ ರಿಧಿಮಾ ಪಂಡಿತ್ ಹಾಗೂ ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. 2024ರ ಡಿಸೆಂಬರ್ನಲ್ಲಿ ಇವರ ಮದುವೆ ನಡೆಯಲಿದೆ ಎಂದು ಕೂಡ ಹೇಳಲಾಗಿತ್ತು. ಅಚ್ಚರಿ ಎಂದರೆ ಇಬ್ಬರ ಮಧ್ಯೆ ವಯಸ್ಸಿನ ಅಂತರ 9 ವರ್ಷ. ರಿಧಿಮಾಗೆ 33 ವರ್ಷ. ಶುಭ್ಮನ್ಗೆ 24 ವರ್ಷ. ಈ ಮದುವೆ ವದಂತಿಗೆ ರಿಧಿಮಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದಿದ್ದಾರೆ.
2016ರಲ್ಲಿ ಪ್ರಸಾರ ಕಂಡ ಬಹು ಹಮಾರಿ ರಜ್ನಿ ಕಾಂತ್ ಧಾರವಾಹಿ ಮೂಲಕ ರಿಧಿಮಾ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಆ ಬಳಿಕ ಅವರು ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಿಧಿಮಾ ಅವರು ಶುಭ್ಮನ್ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅವರು ಸುಳ್ಳು ಎಂದಿದ್ದಾರೆ.
‘ನಾನು ಮುಂಜಾನೆ ಎದ್ದೆ. ನನಗೆ ಪತ್ರಕರ್ತರಿಂದ ಹಲವು ಫೋನ್ಕಾಲ್ಗಳು ಬಂದವು. ನನ್ನ ಮದುವೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಒಂದೊಮ್ಮೆ ನನ್ನ ಜೀವನದಲ್ಲಿ ಏನಾದರೂ ಮುಖ್ಯವಾದುದ್ದು ಘಟಿಸುತ್ತಿದೆ ಎಂದಾದರೆ ನಾನೇ ಬಂದು ಘೋಷಣೆ ಮಾಡುತ್ತೇನೆ. ಈಗ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ನಿಜವಿಲ್ಲ’ ಎಂದಿದ್ದಾರೆ.
ರಿಧಿಮಾ ಪಂಡಿತ್ ಅವರ ಈ ಸ್ಪಷ್ಟನೆಯಿಂದ ಶುಭ್ಮನ್ ಗಿಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡಲ್ಕೂರ್ ಜೊತೆ ಶುಭ್ಮನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದೇ ಹೋಟೆಲ್ನಲ್ಲಿ ಇವರು ಕೆಲವು ಬಾರಿ ಕಾಣಿಸಿಕೊಂಡಿದ್ದು ಇದೆ. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆ ಆಗಿದ್ದರು. ರಿಧಿಮಾ ಜೊತೆಗಿನ ಮದುವೆ ವಿಚಾರದ ಬಳಿಕ ಶುಭ್ಮನ್ ಹಾಗೂ ಸಾರಾ ಅವರದ್ದು ಬ್ರೇಕಪ್ ಆಯಿತೇ ಎನ್ನುವ ಪ್ರಶ್ನೆ ಮೂಡಿತ್ತು. ಅದೆಲ್ಲದಕ್ಕೂ ರಿಧಿಮಾ ಸ್ಟೇಟ್ ಮೆಂಟ್ ನಿಂದ ಸ್ಪಷ್ಟನೆ ಸಿಕ್ಕಿದೆ.