ಬಾಲಿವುಡ್ ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಝಹೀರ್ ಇಖ್ಬಾಲ್ ಜೊತೆ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮುಂಬೈನಲ್ಲಿ ನಡೆದ ಮದುವೆಗೆ ಕೇವಲ ಆಪ್ತರು ಹಾಗೂ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇವರದ್ದು ಅಂತರ್ಧರ್ಮೀಯ ವಿವಾಹವಾಗಿದ್ದು ಮದುವೆಯ ಬಳಿಕ ಝಹೀರ್ ಇಖ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಅವರು ಮೊದಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
7 ವರ್ಷಗಳಿಂದ ಸೋನಾಕ್ಷಿ ಹಾಗೂ ಝಹೀರ್ ಇಖ್ಬಾಲ್ ಪ್ರೀತಿಸುತ್ತಿದ್ದು ತಮ್ಮ ಪ್ರೀತಿಯನ್ನು ಸಾಕಷ್ಟು ಗೌಪ್ಯತೆಯಿಂದ ಕಾಪಾಡಿಕೊಂಡಿದ್ದರು. ಇದೀಗ ಎರಟು ಕುಟುಂಬಸ್ಥರ ಒಪ್ಪಿಗೆ ಪಡೆದು ಜೋಡಿಗಳು ಮದುವೆಯಾಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಝಹೀರ್ ಇಖ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಅವರು ತಮ್ಮ ಲವ್ ಸ್ಟೋರಿಯ ಫ್ಲ್ಯಾಶ್ಬ್ಯಾಕ್ ಬಗ್ಗೆ ತಿಳಿಸಿದಾರೆ.‘7 ವರ್ಷಗಳ ಹಿಂದೆ ಇದೇ ದಿನಾಂಕದಂದು (23.06.2017) ಪರಸ್ಪರ ನಾವು ನಮ್ಮ ಕಣ್ಣಿನಲ್ಲಿ ನಿರ್ಮಲವಾದ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದೆವು. ಅದೇ ಪ್ರೀತಿ ನಮಗೆ ಎಲ್ಲ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ’ ಎಂದು ನವ ದಂಪತಿ ಪೋಸ್ಟ್ ಮಾಡಿದ್ದಾರೆ.
‘ಎರಡು ಕುಟುಂಬದವರ ಮತ್ತು ದೇವರ ಆಶೀರ್ವಾದದಿಂದ ನಾವು ಇಂದು ಸತಿ-ಪತಿ ಆಗಿದ್ದೇವೆ’ ಎಂದು ಬರೆದುಕೊಳ್ಳುವ ಮೂಲಕ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರು ತಮ್ಮ ಮದುವೆಯ ಸಿಹಿ ಸುದ್ದಿಯನ್ನು ಫೋಟೋ ಸಮೇತ ನೀಡಿದ್ದಾರೆ. ಇದು ಅಂತರ್ಧರ್ಮೀಯ ವಿವಾಹ ಆದ್ದರಿಂದ ಆರಂಭದಲ್ಲಿ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಗಾಸಿಪ್ ಹಬ್ಬಿತ್ತು. ನಂತರದ ದಿನಗಳಲ್ಲಿ ಅವರು ಆ ಮಾತನ್ನು ತಳ್ಳಿ ಹಾಕಿದ್ದರು. ಇಂದು ಶತ್ರುಘ್ನ ಸಿನ್ಹಾ ಅವರು ಖುಷಿಯಿಂದಲೇ ಪಾಲ್ಗೊಂಡಿದ್ದಾರೆ. ರಾತ್ರಿ ಬಾಲಿವುಡ್ನ ಆಪ್ತರಿಗಾಗಿ ರಿಸೆಪ್ಷನ್ ಆಯೋಜಿಸಲಾಗಿದ್ದು ಸಾಕಷ್ಟು ಮಂದಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು.