ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್ನಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಶ್ರೀಲೀಲಾಗೆ ಚಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದು ಅವರ ಪಾತ್ರಕ್ಕೆ ಟ್ವಿಸ್ಟ್ ಸಿಕ್ಕಿದೆ.
ನಂದಮೂರು ಬಾಲಕೃಷ್ಣ ನಟನೆಯ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ಬಾಲಯ್ಯನ ಮಗಳ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದು ಬಾಲಯ್ಯ ಫ್ಯಾನ್ಸ್ಗೆ ಕೊಂಚ ಅಚ್ಚರಿ ಹುಟ್ಟಿಸಿದ್ದಂತೂ ಸುಳ್ಳಲ್ಲ. ಆದರೆ ಈಗ ಆ ಬಗ್ಗೆ ಒಂದಷ್ಟು ವಿವರ ಹೊರ ಬಿದ್ದಿದೆ. ಅದೇನೆಂದರೆ ಶ್ರೀಲೀಲಾ ಚಿತ್ರದಲ್ಲಿ ಬಾಲಯ್ಯನ ಮಗಳ ಪಾತ್ರ ಮಾಡುತ್ತಿಲ್ಲ.
ಸದ್ಯ ಚಿತ್ರತಂಡದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ, ನಂದಮೂರಿ ಬಾಲಕೃಷ್ಣ ಅವರು ಶ್ರೀಲೀಲಾಗೆ ಚಿಕ್ಕಪ್ಪನ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ನಾಯಕಿಯಾಗಿ ಫೇಮಸ್ ಆಗುತ್ತಿರುವ ಹೊತ್ತಿನಲ್ಲಿ ಶ್ರೀಲೀಲಾ ಯಾಕೆ ಮಗಳ ಪಾತ್ರ ಮಾಡೋಕೆ ರೆಡಿ ಆದ್ರು ಅಂತಲೇ ಎಲ್ಲರೂ ಪ್ರಶ್ನೆ ಮಾಡಿದ್ದರು. ಆದರೆ ಶ್ರೀಲೀಲಾ ಇಲ್ಲಿ ಬಾಲಯ್ಯಗೆ ಮಗಳ ಪಾತ್ರ ಮಾಡುತ್ತಿಲ್ಲ. ತಂದೆ-ತಾಯಿಯನ್ನು ಕಳೆದುಕೊಂಡ ಶ್ರೀಲೀಲಾ, ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಾರಂತೆ. ತನ್ನ ಅಣ್ಣನ ಮಗಳನ್ನು ಬಾಲಯ್ಯ ಬಹಳ ಜತನದಿಂದ ಕಾಯುತ್ತಿರುವುದೇ ಸಿನಿಮಾದ ಕಥೆಯಾಗಿದೆ.
ಅಣ್ಣನ ಮಗಳ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಂಡರೆ, ಬಾಲಯ್ಯಗೆ ಜೋಡಿಯಾಗಿ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಮದುವೆ ನಂತರ ಗಂಡ, ಮನೆ, ಮಗು ಅಂತ ಬ್ಯುಸಿ ಇದ್ದ ಕಾಜಲ್ ಇದೀಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡುತ್ತಿದ್ದಾರೆ.