ಬಿಜೆಪಿಯ ಗೋರಖ್ ಪುರದ ಸಂಸದ ರವಿ ಕಿಶನ್ ತನ್ನ ತಂದೆ ಎಂದು ನಟಿ ಶಿನೋವಾ ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಂಬೈ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದು, ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಅಪರ್ಣಾ ಸೋನಿ ಜೊತೆ ರವಿ ಕಿಶನ್ ಅವರಿಗೆ ಸಂಬಂಧ ಇತ್ತು. ಆ ಸಂಬಂಧದಿಂದ ಜನಿಸಿದ ಮಗಳು ನಾನು ಎಂದು ಮೊಕದ್ದಮೆಯಲ್ಲಿ ಶಿನೋವಾ ತಿಳಿಸಿದ್ದಾರೆ. ಕಿಶನ್ ತನ್ನ ತಂದೆ ಎಂದು ಬಹಿರಂಗಗೊಳಿಸಿದ ನಂತರ ಉತ್ತರ ಪ್ರದೇಶದಲ್ಲಿ ಸೋನಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮೂರು ದಿನಗಳ ಹಿಂದೆ ಕಿಶನ್ ಅವರ ಪತ್ನಿ ಪ್ರೀತಿ ಶುಕ್ಲಾ ಅವರು ಶಿನೋವಾ ಸೇರಿ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ರವಿ ಕಿಶನ್ ಅವರು ತನ್ನ ತಂದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರೀತಿ ಶುಕ್ಲಾ ಅವರು ಎಫ್ಐಆರ್ ದಾಖಲಿಸಿದ್ದರು. ರವಿ ಕಿಶನ್ ಅವರು ತನ್ನ ಮಗಳಿಗೆ ಅಪ್ಪ ಎಂದು ಹೇಳಿಕೊಂಡಿರುವ ಮಹಿಳೆ ಅಪರ್ಣಾ ಠಾಕೂರ್ ಮಾತ್ರವಲ್ಲದೆ, ಆಕೆಯ ಪತಿ ರಾಜೇಶ್ ಸೋನಿ, ಮಗಳು ಶೆನೋವಾ ಸೋನಿ, ಮಗ ಸೋನಕ್ ಸೋನಿ ಹಾಗೂ ಸಮಾಜವಾದಿ ಪಕ್ಷದ ನಾಯಕ ವಿವೇಕ್ ಕುಮಾರ್ ಪಾಂಡೆ ಮತ್ತು ಪತ್ರಕರ್ತ ಖುರ್ಷಿದ್ ಖಾನ್ ಅವರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ತನಗೆ ಭೂಗತ ಲೋಕದ ಜತೆ ನಂಟು ಇದೆ ಎಂದು ಅಪರ್ಣಾ ಠಾಕೂರ್ ಬೆದರಿಕೆ ಹಾಕಿರುವುದಾಗಿ ಬಿಜೆಪಿ ಸಂಸದ ರವಿ ಕಿಶನ್ ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದರು. 20 ಕೋಟಿ ರೂ ಹಣ ನೀಡಬೇಕು. ತನ್ನ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ರವಿ ಕಿಶನ್ ಅವರ ಹೆಸರು ಕೆಡಿಸುವುದಾಗಿ ಆಕೆ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.