ಮೈಸೂರು: ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸ್ಪಷ್ಟ ಬಹುಮತ ಸಾಧಿಸಿದ ಬೆನ್ನಲ್ಲೇ ಮೈಸೂರಿನ ರಂಗಾಯಣ (Mysuru Rangayana) ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ (Addanda C Cariappa) ರಾಜೀನಾಮೆ (Resignation) ನೀಡಿದ್ದಾರೆ.
ಅಡ್ಡಂಡ ಕಾರ್ಯಪ್ಪ ಮೈಸೂರು ರಂಗಾಯಣದ ನಿರ್ದೇಶಕರಾದ ಮೇಲೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ‘ಟಿಪ್ಪು ನಿಜಕನಸುಗಳು’ ನಾಟಕ ರಚಿಸಿ ವಿವಾದವನ್ನು ಸೃಷ್ಟಿಸಿ ಬಳಿಕ ‘ಸಿದ್ದರಾಮಯ್ಯ ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು.ಚುನಾವಣೆಗೆ ಮುನ್ನ ಉರಿಗೌಡ ಹಾಗೂ ನಂಜೇಗೌಡ ಪಾತ್ರಗಳನ್ನು ಮುನ್ನಲೆಗೆ ತಂದು ಒಕ್ಕಲಿಗ ಹಾಗೂ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿತ್ತು.
ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಡ್ಡಂಡ ಕಾರ್ಯಪ್ಪ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.