ಮಂಡ್ಯ :- ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಭವಿಸುತ್ತಿರುವ ಅಪಘಾತದ ಹಿನ್ನೆಲೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ನಡೆಸಿದರು.
ಕೆಲ ದಿನಗಳ ಹಿಂದೆ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿದ್ದ ಎಡಿಜಿಪಿ ಅಲೋಕ್ ಕುಮಾರ್ ಅವರು ಶುಕ್ರವಾರ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ಪಡೆದುಕೊಂಡರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಿಲ್ಲಾ ಗಡಿ ಭಾಗ ನಿಡಘಟ್ಟ ಗ್ರಾಮದ ಬಳಿಯಿಂದ ಪರಿಶೀಲನೆ ಆರಂಭಿಸಿದ ಅಲೋಕ್ ಕುಮಾರ್ ಹೆಚ್ಚಿನ ಅಪಘಾತ ಪ್ರಕರಣಗಳು ನಡೆದ ಸ್ಥಳಗಳಿಗೆ ತೆರಳಿ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು.
ಇದೇ ವೇಳೆ ನಿಡಘಟ್ಟ, ಅಗರಲಿಂಗನದೊಡ್ಡಿ ಹಾಗೂ ಕೆ.ಕೋಡಿಹಳ್ಳಿ ಗ್ರಾಮಸ್ಥರು ಹೆದ್ದಾರಿಯಲ್ಲಿ ಉಂಟಾಗಿರುವ ಲೋಪ ದೋಷಗಳು, ಸರ್ವಿಸ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳ ಉಳಿಕೆ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶೀಘ್ರವೇ ಕೈಗೆತ್ತಿಕೊಂಡು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.
ಇನ್ನು ಇದೇ ವೇಳೆ ಮದ್ದೂರು ಬೈಪಾಸ್ ರಸ್ತೆಯಲ್ಲಿ ಹೆಚ್ಚಿನ ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಬೀದಿ ದೀಪಗಳು ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ ಹೀಗಾಗಿ ಶಿಂಷಾ ನದಿಯಿಂದ ನಿಡಘಟ್ಟ ಗ್ರಾಮದವರೆಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಕೆ.ಕೋಡಿಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು. ಇನ್ನು ಶಿಂಷಾ ನದಿ ಬಳಿ ಸರ್ವಿಸ್ ರಸ್ತೆಗೆ ಒಂದು ಕಡೆ ಮಾತ್ರ ಸೇತುವೆ ನಿರ್ಮಾಣ ಮಾಡಿದ್ದು, ಮತ್ತೊಂದು ಸೇತುವೆ ಕಾಮಗಾರಿ ಕೈಗೊಳ್ಳುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರು.
ಹೆದ್ದಾರಿಯ ವಾಹನ ಸವಾರರೊಬ್ಬರು ರಸ್ತೆಯ ಅಕ್ಕ ಪಕ್ಕದಲ್ಲಿ ಕಲ್ಲು ಮತ್ತು ಮಣ್ಣಿನ ರಾಶಿಯಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ, ಚರಂಡಿ ಕಾಮಗಾರಿಗಳು ಕೆಲವೆಡೆ ಅಪೂರ್ಣಗೊಂಡಿವೆ, ಸರ್ವಿಸ್ ರಸ್ತೆಗಳಲ್ಲಿ ಸೂಚನಾ ಫಲಕ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕುವಂತೆ ಅಲೋಕ್ ಕುಮಾರ್ ಅವರ ಗಮನ ಸೆಳೆದರು.
ಹೆದ್ದಾರಿಯ ವಾಹನ ಸವಾರರು ಹಾಗೂ ಗ್ರಾಮಸ್ಥರಿಂದ ಸಮಸ್ಯೆಗಳನ್ನು ಆಲಿಸಿದ ಅಲೋಕ್ ಕುಮಾರ್ ಅವರು
ಕೆಲವೊಂದು ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು ಹಾಗೂ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಜೊತೆಗೆ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸೂಚನೆ ನೀಡಿದರು.
ಇದೇ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್, ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ನವೀನ್ ಕುಮಾರ್, ಇನ್ಸ್ಪೆಕ್ಟರ್ ಸಂತೋಷ್, ಸಬ್ ಇನ್ಸ್ಪೆಕ್ಟರ್ ಸಿದ್ದರಾಜು, ಅಯ್ಯನಗೌಡ ಹಾಗೂ ಸಿಬ್ಬಂದಿ ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ