ಬೆಂಗಳೂರು : ಸಾರ್ವಜನಿಕ ಬಸ್ಗಳ ಮೇಲೆ ತಂಬಾಕು ಜಾಹೀರಾತುಗಳ ಕುರಿತು ಆಕ್ಷೇಪದ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಯುವಕರ ಹಾದಿ ತಪ್ಪಿಸುವ ಜಾಹೀರಾತು ಪ್ರಕಟಿಸದಂತೆ ಸಾರಿಗೆ ಸಂಸ್ಧೆಗಳಿಗೆ ಸೂಚಿಸಿದೆ.
ಬಸ್ಗಳ ಮೇಲಿನ ತಂಬಾಕು ಜಾಹೀರಾತುಗಳನ್ನು ಕೈಬಿಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ನಿಗಮಕ್ಕೆ ಸೂಚನೆ ನೀಡಿದೆ ಎನ್ನುವ ವಿಷಯ ತಿಳಿದು ಬಂದಿದೆ.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇಂತಹ ಜಾಹೀರಾತುಗಳು ಯುವಕರು ಹಾಗೂ ಮಕ್ಕಳನ್ನು ಹಾದಿ ತಪ್ಪಿಸಲಿವೆ. ಹೀಗಾಗಿ ಇಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ.
ಮೇ 4ರಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಪತ್ರ ಬರೆದಿದೆ. ”ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಜಾಹೀರಾತುಗಳನ್ನು ಹಾಕಿರುವುದು ನಮ್ಮ ಗಮನಕ್ಕೆ ಬಂದಿದೆ. ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು ಕೊಟ್ಪಾ (ಸಿಒಟಿಪಿಎ) ಸೆಕ್ಷನ್ 5 ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಎಫ್ಸಿಟಿಸಿ ಕಾಯ್ದೆ 5.3 ರ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಮೇ 31 ರಂದು ವಿಶ್ವ ತಂಬಾಕು ನಿಷೇಧ ದಿನವನ್ನಾಗಿ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ತಂಬಾಕು ಸೇವನೆಯಿಂದಾ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಏಪ್ರಿಲ್ 7, 1988 ರಂದು ವಿಶ್ವ ಧೂಮಪಾನ ರಹಿತ ದಿನ ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಕನಿಷ್ಠ 24 ಗಂಟೆಗಳ ಕಾಲ ತಂಬಾಕು ಸೇವನೆಯನ್ನು ತಡೆಯಲು ಜನರನ್ನು ಪ್ರೇರೇಪಿಸಲು ಈ ಕಾಯ್ದೆಯನ್ನು ಅಂಗೀಕರಿಸಲಾಗಿದೆ.