ಲಾಹೋರ್: ಏಷ್ಯಾ ಕಪ್ ಕ್ರಿಕೆಟ್ (Asia Cup Cricket) ಸೂಪರ್ 4 ಪ್ರವೇಶಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ (Afghanistan) ವಿರೋಚಿತ ಸೋಲನ್ನು ಅನುಭವಿಸಿದ್ದು, ಶ್ರೀಲಂಕಾ (Sri Lanka) 2 ರನ್ಗಳ ಜಯ ಸಾಧಿಸುವ ಮೂಲಕ ಸೂಪರ್ 4 ಪ್ರವೇಶ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಈ ಮೊತ್ತ ಸವಾಲಿನ ಮೊತ್ತವಾಗಿದ್ದರೂ ಅಫ್ಘಾನಿಸ್ತಾನಕ್ಕೆ ಮತ್ತೊಂದು ಸವಾಲು ಇತ್ತು.
ಬಾಂಗ್ಲಾದೇಶದ (Bangladesh) ವಿರುದ್ಧ ಪಂದ್ಯ ಸೋತಿದ್ದರಿಂದ ನೆಟ್ ರನ್ ರೇಟ್ ಬಹಳ ಕಡಿಮೆ ಇತ್ತು. ಹೀಗಾಗಿ 37 ಓವರ್ನಲ್ಲಿ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಇತ್ತು. ಈ ಕಾರಣಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ 37.4 ಓವರ್ಗಳಲ್ಲಿ 289 ರನ್ಗಳಿಸಿ ಆಲೌಟ್ ಆಗಿ ಟೂರ್ನಿಯಿಂದ ಹೊರ ಬಿತ್ತು.
ಆರಂಭದಲ್ಲೇ ಅಫ್ಘಾನಿಸ್ತಾನ ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 59 ರನ್(66 ಎಸೆತ, 3 ಬೌಂಡರಿ, 1 ಸಿಕ್ಸರ್) ರಹ್ಮತ್ ಶಾ 45 ರನ್ (40 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಚೇತರಿಕೆ ನೀಡಿದರು.
ನಂತರ ಬಂದ ಮೊಹಮ್ಮದ್ ನಬಿ ಬಿರುಸಿನ ಬ್ಯಾಟ್ ಬೀಸಿದರು. ಕೇವಲ 32 ಎಸೆತಗಳಲ್ಲಿ 65 ರನ್(6 ಬೌಂಡರಿ, 5 ಸಿಕ್ಸರ್ ) ಸಿಡಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು. ಕೊನೆಯಲ್ಲಿ ನಜಿಬುಲ್ಲಾ ಮತ್ತು ರಷೀದ್ ಖಾನ್ ಗೆಲುವಿನ ದಡದತ್ತ ತಂದಿದ್ದರು. ಇವರಿಬ್ಬರು 23 ಎಸೆತಗಳಲ್ಲಿ 39 ರನ್ ಜೊತೆಯಾಟವಾಡಿದರು. ಇನ್ನೇನು ಅಫ್ಘಾನ್ಗೆ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾಗ ನಜಿಬುಲ್ಲಾ 23 ರನ್( 15 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಹೀಗಿದ್ದರೂ ರಶೀದ್ ಖಾನ್ ಇನ್ನೊಂದು ಕಡೆಯಲ್ಲಿ ನಿಂತು ಅಬ್ಬರಿಸುತ್ತಿದ್ದರು. ಆದರೆ 37.1ನೇ ಓವರಿಗೆ ಮುಜೀಬ್ ಮತ್ತು 37.4ನೇ ಎಸೆತಕ್ಕೆ ಫಾರೂಕಿ ಔಟಾಗುವುದರೊಂದಿಗೆ ಅಫ್ಘಾನಿಸ್ತಾನ ಏಷ್ಯಾ ಕಪ್ನಿಂದ ನಿರ್ಗಮಿಸಿತು.