ಬೆಂಗಳೂರು:- ಅಸಲಿಗೆ ಜೆಡಿಎಸ್ ಪಕ್ಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಬೇಕಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕುಟುಂಬದವರೇ ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಜೆಡಿಎಸ್ ನೆಚ್ಚಿಕೊಂಡಿದ್ದ ಜೆಡಿಎಸ್ನವರು ಭವಿಷ್ಯ ಹುಡುಕುತ್ತಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಸಾಕಷ್ಟು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದು, ಸ್ಥಳೀಯ ಮಟ್ಟದಲ್ಲೇ ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಸೂಚಿಸಲಾಗಿದೆ’ ಎಂದೂ ಹೇಳಿದರು.
ಜೆಡಿಎಸ್ ಕಾರ್ಯಕರ್ತರೂ ಮುಂದಿನ ರಾಜಕೀಯ ಭವಿಷ್ಯವನ್ನು ನೋಡುತ್ತಾರಲ್ಲವೇ? ನಮ್ಮ ಗತಿ ಏನು ಎಂದು ದಳದ ಕಾರ್ಯಕರ್ತರು ನಮ್ಮ ಪಕ್ಷದ ನಾಯಕರ ಸಂಪರ್ಕ ಮಾಡುತ್ತಿದ್ದಾರೆ. ನಾನು ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಾಯಕ. ನಮ್ಮ ಚುನಾವಣಾ ಅಭ್ಯರ್ಥಿಯ ಘೋಷಣೆಯೂ ಆಗಿದೆ. ನಾವು ಸಹ ತಯಾರಿ ಮಾಡಿಕೊಳ್ಳಬೇಕಲ್ಲವೇ? ಎಂದು ಪರೋಕ್ಷವಾಗಿ ಬಿಜೆಪಿ-ಜೆಡಿಎಸ್ ನಾಯಕರನ್ನು ಸೆಳೆಯುವ ಸುಳಿವು ನೀಡಿದರು.
ಡಿ.ಕೆ.ಸುರೇಶ್ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದಿರುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಮೊದಲು ಅವರ ಪಕ್ಷದ ಪರಿಸ್ಥಿತಿ ಬಗ್ಗೆ ಮಾತನಾಡಲಿ. ಜೆಡಿಎಸ್ ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ಮೊದಲು ಹೇಳಲಿ. ಆನಂತರ ಪ್ರಬಲ ಅಭ್ಯರ್ಥಿ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು.