ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ದರ್ಶನ್ ಎಂಡ್ ಗ್ಯಾಂಗ್ ಹತ್ಯೆ ಮಾಡಿದೆ. ಘಟನೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪಟ್ಟು 18 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ನಟ ದರ್ಶನ್ ನಾನು ಶೆಡ್ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್ ಸದಸ್ಯರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸರ್ ನನಗೇನು ಗೊತ್ತಿಲ್ಲ ಅವನನ್ನ ಕರ್ಕೊಂಡ್ ಬಂದಿರೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ವಿಚಾರ ಪೊಲೀಸ್ ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿಯನ್ನು ಕರ್ಕೊಂಡ್ ಬಂದಿದ್ದ ದಿನ ನಾನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿದ್ದೆ. ಹುಡುಗರ ಜೊತೆ ಮದ್ಯ ಹಾಕುತ್ತಿದ್ದಾಗ ಪವನ ಅಲ್ಲಿಗೆ ಬಂದಿದ್ದ. ನನ್ನ ಕಿವಿಯಲ್ಲಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದಾಗಿ ಹೇಳಿದ. ನಾನು ಸೀದಾ ಅಲ್ಲಿಂದ ಮನೆಗೆ ಹೋಗಿ ಪವಿತ್ರಾಳನ್ನು ಕರೆದುಕೊಂಡು ಶೆಡ್ಗೆ ಹೋದೆ. ಅವನನ್ನು ಕೊಲೆ ಮಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ. ನಾಲ್ಕು ಹೊಡೆದು ಅವನ ಕೈಯಿಂದ ಸಾರಿ ಎಂದು ಹೇಳಿಸಬೇಕು ಅಂತ ಇದ್ದೆ.
ನನ್ನ ಪವಿತ್ರಾನ ನೋಡುತ್ತಿದ್ದಂತೆ ಅವನು ತಪ್ಪಾಯ್ತು ಅಂತ ಕೇಳಿಕೊಂಡ. ಆಮೇಲೆ ನಾನು ಅವನಿಗೆ ಊಟಕ್ಕೆ ದುಡ್ಡು ಕೊಟ್ಟು ಊಟ ಮಾಡಿಕೊಂಡು ಊರಿಗೆ ಹೋಗು ಅಂತ ಹೇಳಿ ಬಂದೆ. ನಾನು ಶೆಡ್ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ. ಅಷ್ಟೇ ಸರ್ ವಿಷಯ. ನನಗೆ ಬೇರೆ ಏನು ಗೊತ್ತಿಲ್ಲ ಎಂದು ಪೊಲೀಸರ ಮುಂದೆ ನಟ ದರ್ಶನ್ ಹೇಳಿಕೆ ನೀಡಿದ್ದಾರೆ.