ಬೆಂಗಳೂರು: ಅಮೆರಿಕ ದೂತವಾಸ ಕಚೇರಿಯನ್ನು (ಕಾನ್ಸುಲೇಟ್) ಬೆಂಗಳೂರಿನಲ್ಲಿ ಆರಂಭಿಸುವ ನಿಟ್ಟಿನಲ್ಲಿನ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ಅಮೆರಿಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರ ಪ್ರಸ್ತಾಪಿಸಿದ್ದರು. ಅದರಂತೆ ಅಮೆರಿಕವು ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ಆರಂಭಿಸುವ ಸಂಬಂಧ ನಮ್ಮ ಪ್ರಯತ್ನಗಳು ಮುಂದುವರಿದಿದೆ,” ಎಂದು ಪುನರುಚ್ಚರಿಸಿದರು.
”ಭಯೋತ್ಪಾದನೆ ಹಾಗೂ ಯುದ್ಧಗಳಿಂದ ಇಡೀ ಜಗತ್ತು ಅತ್ಯಂತ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದೆ. ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಅಗತ್ಯವಿದೆ,” ಎಂದು ಹೇಳಿದರು. ”2014ಕ್ಕೂ ಮೊದಲು ದೇಶದಲ್ಲಿ ನಿರಂತರವಾಗಿ ಭಯೋತ್ಪಾದಕರ ದಾಳಿ ನಡೆದರೂ ಪ್ರತ್ಯುತ್ತರ ನೀಡುವ,
ತಡೆಯುವ ಪ್ರಯತ್ನ ಮಾಡದೆ ಮೃದು ಧೋರಣೆ ತೋರಲಾಗುತ್ತಿತ್ತು. ಮುಂಬೈ ದಾಳಿ ಸಂದರ್ಭದಲ್ಲಿ ಭಾರತ ಅಸಹಾಯಕ ಸ್ಥಿತಿಯಲ್ಲಿತ್ತು. ಆದರೆ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿಭಯೋತ್ಪಾದಕರ ಆಟ ನಡೆಯುತ್ತಿಲ್ಲ. ಭಯೋತ್ಪಾದನೆ ನಿಗ್ರಹ ಜತೆ ದೇಶದ ಗಡಿಗಳನ್ನು ಸುಭದ್ರಗೊಳಿಸಲಾಗಿದೆ,” ಎಂದು ತಿಳಿಸಿದರು.