ಬೆಂಗಳೂರು ;- ಮುಂಗಾರು ಮಳೆ ಕೊರತೆ ಮುಂದುವರಿದರೆ, ಬರಪೀಡಿತ ಪ್ರದೇಶಗಳ ಘೋಷಣೆಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಜೂನ್ ತಿಂಗಳಿನಲ್ಲಿ ಮಳೆಯ ಕೊರತೆ ಇತ್ತು. ಕಳೆದ 10 ದಿನಗಳಿಂದ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಉತ್ತಮ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ವಿವರಿಸಿದರು.
ಪ್ರಕೃತಿ ವಿಕೋಪ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕಳೆದ ಮಂಗಳವಾರ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿದ್ದು, ಎಲ್ಲೆಲ್ಲಿ ಮಳೆ ಕೊರತೆ ಇದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಹೋಬಳಿ ಮಟ್ಟದಲ್ಲೂ ಮಳೆಯ ವ್ಯತ್ಯಾಸವಾಗುತ್ತಿದೆ. ಆದರೆ ಸರಾಸರಿ ಮಳೆಯ ಪ್ರಮಾಣ ಸುಧಾರಣೆಯಾಗುತ್ತಿದೆ. ಈ ತಿಂಗಳ 15ರ ವರೆಗೂ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಬರಪೀಡಿತ ಪ್ರದೇಶಗಳ ಘೋಷಣೆ ಬಗ್ಗೆ ನಿರ್ಧರಿಸಲಾಗುವುದು ಎಂದರು.
ರಾಜ್ಯದಲ್ಲಿ 193 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. 339 ಬೋರ್ವೆಲ್ಗಳನ್ನು ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳು ಟ್ಯಾಂಕರ್ ನೀರು ಸರಬರಾಜಿಗೆ ಹಣ ನೀಡುವುದಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಎಲ್ಲಿಯಾದರೂ ಸಮಸ್ಯೆಗಳು ಕಂಡುಬಂದರೆ ಅದನ್ನು 24 ಗಂಟೆಯೊಳಗೆ ಬಗೆಹರಿಸಲು ತಾವು ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರು ಸಿದ್ಧರಾಗಿರುವುದಾಗಿ ಹೇಳಿದರು