ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯಿ ಗ್ಯಾಂಗ್ ಸದಸ್ಯರಿಂದ ಜೀವ ಬೆದರಿಕೆ ಕರೆ ಬರುತ್ತಿದೆ. ಇತ್ತೀಚೆಗೆ ಸಲ್ಮಾನ್ ಆಪ್ತ ಸಿದ್ದಿಕಿ ಅವರನ್ನು ಹತ್ಯೆ ಮಾಡಲಾಗಿದ್ದು ಈ ಹತ್ಯೆ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ಹೊತ್ತಿಕೊಂಡಿದೆ. ಅಲ್ಲದೆ ಸಿದ್ದಿಕಿ ಹತ್ಯೆ ಮಾಡಿದಂತೆಯೇ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಬೆನ್ನಲ್ಲೇ ಸಲ್ಮಾನ್ ಮತ್ತೊಂದು ದುಬಾರಿ ಬೆಲೆಯ ಬುಲೆಟ್ ಫ್ರೂವ್ ಕಾರು ಖರೀದಿಸಿದ್ದಾರೆ.
ಸಲ್ಮಾನ್ ಖಾನ್ರ ಆಪ್ತ ಬಾಬಾ ಸಿದ್ಧಿಖಿ ಹತ್ಯೆ ಬೆನ್ನಲ್ಲೆ ಸಲ್ಮಾನ್ ಮತ್ತಷ್ಟು ಜಾಗೃತರಾಗಿದ್ದಾರೆ. ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಸಹ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಸಹ ಸರ್ಕಾರದ ಮೇಲೆ ಅವಲಂಬಿತವಾಗದೆ ತಮ್ಮ ಭದ್ರತೆಯ ಬಗ್ಗೆ ತಾವೇ ಕಾಳಜಿ ವಹಿಸಿದ್ದಾರೆ.
ಸಲ್ಮಾನ್ ಖಾನ್ಗೆ ಈಗಾಗಲೇ ಖಾಸಗಿ ಭದ್ರತಾ ಸಂಸ್ಥೆಯೊಂದು ಭದ್ರತೆ ನೀಡುತ್ತಿದೆ. ಸಲ್ಮಾನ್ ಖಾನ್ರ ಖಾಸಗಿ ಅಂಗರಕ್ಷಕ ಶೇರಾ ಸಹ ಜೊತೆಗೇ ಇರುತ್ತಾರೆ. ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಮುಂಬೈ ಪೊಲೀಸರಿಂದ ಪರವಾನಗಿ ಪಡೆದು ಆಟೊಮ್ಯಾಟಿಕ್ ಬಂದೂಕೊಂದನ್ನು ಸಹ ಪಡೆದುಕೊಂಡಿದ್ದಾರೆ. ಇವುಗಳ ಜೊತೆಗೆ ಸಲ್ಮಾನ್ ಖಾನ್ ದುಬಾರಿ ಬೆಲೆಯ ಬುಲೆಟ್ ಕಾರೊಂದನ್ನು ಇತ್ತೀಚೆಗೆ ಖರೀದಿ ಮಾಡಿದ್ದಾರೆ.
ಸಲ್ಮಾನ್ ಖಾನ್ ಸಾಮಾನ್ಯವಾಗಿ ಮುಂಬೈನಲ್ಲಿ ಓಡಾಡಲು ಬಳಸುವುದು ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು. ಈ ಕಾರಿಗೆ ವಿಶೇಷ ಮಾಡಿಫಿಕೇಶನ್ ಮಾಡಿಸಿ ಇದನ್ನು ಬುಲೆಟ್ ಪ್ರೂಫ್ ಕಾರನ್ನಾಗಿ ಬದಲಾವಣೆ ಮಾಡಿಸಿದ್ದರು. ಆದರೆ ಇತ್ತೀಚೆಗೆ ಬಾಬಾ ಸಿದ್ಧಿಕಿ ನಿಧನದ ಬಳಿಕ ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರನ್ನೇ ಖರೀದಿ ಮಾಡಿದ್ದು ಇದು 2 ಕೋಟಿ ರೂಪಾಯಿ ಕಾರು ಎನ್ನಲಾಗುತ್ತಿದೆ.
ನಿಸ್ಸಾನ್ ಸಂಸ್ಥೆಯ ಎಸ್ಯುವಿ ಕಾರೊಂದನ್ನು ವಿದೇಶದಿಂದ ಆಮದು ಮಾಡಿಸಿಕೊಂಡಿದ್ದಾರೆ ಸಲ್ಮಾನ್ ಖಾನ್. ವಿಶೇಷವಾಗಿ ಆರ್ಡರ್ ನೀಡಿ ಈ ಕಾರಿಗೆ ಸೆಕ್ಯುರಿಟಿ ಫೀಚರ್ಸ್ಗಳನ್ನು ಹಾಕಿಸಲಾಗಿದೆಯಂತೆ. ಎಕೆ 47 ಬಂದೂಕಿನಿಂದ ಬರುವ ಗುಂಡುಗಳನ್ನು ಸಹ ತಡೆದು ನಿಲ್ಲಿಸುವ ಅತ್ಯಂತ ಶಕ್ತಿಶಾಲಿ ಗಾಜುಗಳು ಇದಕ್ಕೆ ಅಳವಡಿಸಲಾಗಿರುವ ಜೊತೆಗೆ ಕಾರಿನ ಒಟ್ಟಾರೆ ಬಾಡಿ ಸಹ ಗುಂಡು ನಿರೋಧಕತೆ ಹೊಂದಿದೆ ಎನ್ನಲಾಗುತ್ತಿದೆ. ಇದು ಗುಂಡು ನಿರೋಧಕ ಆಗಿರುವ ಜೊತೆಗೆ ಬಾಂಬ್ ಅಲರ್ಟ್ ತಂತ್ರಜ್ಞಾನವೂ ಇದರಲ್ಲಿದೆ. ಲ್ಯಾಂಡ್ ಮೈನ್ಗಳನ್ನು ಸಹ ಇದು ಗುರುತಿಸಲಿದೆ ಅಲ್ಲದೆ ಒಂದು ಹಂತದ ವರೆಗೆ ಬಾಂಬ್ ದಾಳಿಯನ್ನು ಸಹ ಇದು ತಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.