ವಾಷಿಂಗ್ಟನ್: ಸ್ಟಾರ್ಟ್ಅಪ್ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿರುವ ಬೆನ್ನಲ್ಲೇ ಅಮೆರಿಕದ ಅಧಿಕಾರಿಗಳು ಮತ್ತೊಂದು ಟೆಕ್ ಸ್ನೇಹಿ ಬ್ಯಾಂಕ್ ಅನ್ನು ಮುಚ್ಚಿರುವುದಾಗಿ ಘೋಷಿಸಿದ್ದಾರೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾದ ಬೆನ್ನಲ್ಲೇ ಇದೀಗ ಸಿಗ್ನೇಚರ್ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಬ್ಯಾಂಕ್ ಕ್ರಿಪ್ಟೋಕರೆನ್ಸಿಗಳ ಸ್ಟಾಕ್ ಅನ್ನು ಹೊಂದಿದ್ದು, ಇದೀಗ ಅಪಾಯದ ದೃಷ್ಟಿಯಿಂದ ಬ್ಯಾಂಕ್ ಅನ್ನು ಸ್ವಲ್ಪ ಸಮಯದವರೆಗೆ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಗ್ನೇಚರ್ ಬ್ಯಾಂಕ್ ನ್ಯೂಯಾರ್ಕ್ ನಲ್ಲಿರುವ ಪ್ರಾದೇಶಿಕ ಬ್ಯಾಂಕ್ ಆಗಿದ್ದು, ಕಳೆದ ವರ್ಷ ಕೊನೆಯಲ್ಲಿ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ ತೆಗೆದುಕೊಂಡಿದೆ ಎಂದು ನ್ಯೂಯಾರ್ಕ್ ರಾಜ್ಯ ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ. ಸದ್ಯ ಸಿಗ್ನೇಚರ್ ಬ್ಯಾಂಕ್ ಹಾಗೂ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಯಾವುದೇ ನಷ್ಟದ ಹೊರೆಯನ್ನು ತೆರಿಗೆದಾರರು ಭರಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.