ಗುವಾಹಟಿ : ಅಕ್ರಮ ಮದ್ರಸಾಗಳ ಬಂದ್, ಬಾಲ್ಯವಿವಾಹಕ್ಕೆ ಕಡಿವಾಣದ ಬೆನ್ನಲ್ಲೇ, ಬಹುಪತ್ನಿತ್ವ ತಡೆಗೆ ಕಾಯ್ದೆ ರೂಪಿಸಲು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಬಹುದೇ ಎಂಬುದರ ಬಗ್ಗೆ ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ನಾಲ್ವರು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಮೂಲಕ ಇಂಥ ಕಾಯ್ದೆ ರಚನೆಗೆ ಮುಂದಾದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.
ಈ ಸಮಿತಿಯು ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯಾ) ಕಾಯ್ದೆ, 1937 ಮತ್ತು ಭಾರತೀಯ ಸಂವಿಧಾನದ 25ನೇ ವಿಧಿಯನ್ನು ಪರಿಶೀಲಿಸಿ ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಈ ವರದಿ ಸಿದ್ಧಪಡಿಸುವ ವೇಳೆ ಸಮಿತಿಯು ಮುಸ್ಲಿಂ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಿದೆ.
ಸರ್ಕಾರ ರಚಿಸಿದ ಸಮಿತಿಯಲ್ಲಿ ನ್ಯಾ.ರುಮಿ ಫುಕಾನ್, ಅಸ್ಸಾಂ ಅಡ್ವೋಕೇಟ್ ಜನರಲ್ ದೇಬಜಿತ್ ಸೈಕಿಯಾ, ಅಸ್ಸಾಂ ಹೆಚ್ಚುವರಿ ಅಡ್ವೋಕೇಟ್ ಜನರಲ್ ನಳಿನ್ ಕೊಹ್ಲಿ ಮತ್ತು ರಾಜ್ಯ ಹೈಕೋರ್ಟ್ನ ಹಿರಿಯ ವಕೀಲ ನೇಕಿಬುರ್ ಝಮಾನ್ ಸದಸ್ಯರಾಗಿದ್ದಾರೆ.
ಬಹುವಿವಾಹ ಪದ್ಧತಿ ಎಂದರೆ ಏನು?
ಆತ ಅಥವಾ ಆಕೆ ಒಬ್ಬರಿಗಿಂತ ಹೆಚ್ಚಿನ ಸಂಗಾತಿಯನ್ನು ಮದುವೆಯಾಗುವುದನ್ನು ಬಹುವಿವಾಹ ಎನ್ನಲಾಗುತ್ತದೆ. ಆದರೆ ಮಹಿಳೆಯರು ಒಬ್ಬರಿಗಿಂತ ಹೆಚ್ಚಿನ ಪುರುಷರನ್ನು ಮದುವೆಯಾಗುವ ಉದಾಹರಣೆ ತೀರಾ ಕಡಿಮೆ. ಆದರೆ ಪುರುಷರು ಒಬ್ಬರಿಗಿಂತ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವ ಉದಾಹರಣೆ ಸಾಕಷ್ಟಿದೆ. ಇದನ್ನು ಬಹುಪತ್ನಿತ್ವ ಎನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಆದರೆ ಇಸ್ಲಾಂನಲ್ಲಿ ಒಬ್ಬ ವ್ಯಕ್ತಿ ನಾಲ್ವರು ಮಹಿಳೆಯರನ್ನು ವಿವಾಹವಾಗಲು ಅವಕಾಶ ನೀಡುತ್ತದೆ. ಇದಕ್ಕೆ ಷರಿಯಾ ಕಾನೂನು ಅವಕಾಶ ಕಲ್ಪಿಸುತ್ತದೆ.