ಬೆಳಗಾವಿ: ರಾಜಧಾನಿಯನ್ನ ಹೊರತುಪಡಿಸಿ ರಾಜ್ಯದಲ್ಲಿ ಬೆಳಗಾವಿ(Belagavi) ಜಿಲ್ಲೆ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಹೊಂದಿರುವ ಜಿಲ್ಲೆ. ಹದಿನೆಂಟು ಕ್ಷೇತ್ರದ ಪೈಕಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಸಾಕಷ್ಟು ರಣತಂತ್ರವನ್ನ ರೂಪಿಸಿದ್ದವು. ಮುಖ್ಯವಾಗಿ ಜಿಲ್ಲೆಯ ಉಸ್ತುವಾರಿ ಹೊತ್ತು ಅತೀ ಹೆಚ್ಚು ಸ್ಥಾನ ಗೆಲ್ಲಲು ಹೊರಟಿದ್ದ ರಮೇಶ್ ಜಾರಕಿಹೊಳಿ (Ramesh Jarkiholi)ಗೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಹೈಕಮಾಂಡ್ ಮನವೊಲಿಸಿ 6 ಜನ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ್ದರು. ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ್ ಮನ್ನೊಳ್ಕರ್, ಉತ್ತರದಲ್ಲಿ ಡಾ.ರವಿ ಪಾಟೀಲ್, ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿ, ರಾಮದುರ್ಗದಲ್ಲಿ ಚಿಕ್ಕರೇವಣ್ಣ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ರಮೇಶ್ ಯಶಸ್ವಿಯಾಗಿದ್ದರು. ಈ 6 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸೋತಿದ್ದು ಇದೀಗ ಸಾಹುಕಾರ್ಗೆ ಭಾರಿ ಹಿನ್ನಡೆಯಾಗಿದೆ.
ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸುವುದರಲ್ಲೇ ಎಡವಿ ಈ ಮಟ್ಟಿಗೆ ಮುಖಬಂಗ ಅನುಭವಿಸಿದ್ರೂ ಎನ್ನುವ ಚರ್ಚೆ ಇದೀಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪಕ್ಷಕ್ಕೆ ಸಂಬಂಧ ಇಲ್ಲದ ನಾಗೇಶ್ ಮನ್ನೋಳ್ಕರ್ ಮತ್ತು ಚಿಕ್ಕರೇವಣ್ಣನವರಿಗೆ ಟಿಕೆಟ್ ಕೊಡಿಸಿದ್ರೆ, ಆ್ಯಕ್ಟೀವ್ ಇಲ್ಲದ ರವಿ ಪಾಟೀಲ್ ಗೆ ಟಿಕೆಟ್ ಕೊಡಿಸಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಅಥಣಿಯಲ್ಲಿ ಸವದಿ ವಿರುದ್ದ ಸೋತ್ರೆ, ಕಾಗವಾಡದಲ್ಲಿ ಗೆಲ್ತೇವಿ ಎನ್ನುವ ಹುಮ್ಮಸ್ಸಿನಲ್ಲಿ ಮತದಾರರನ್ನ ಮರೆತು ಸೋಲು ಕಂಡ್ರು. ಇನ್ನು ಯಮಕನಮರಡಿಯಲ್ಲಿ ಟಿಕೆಟ್ ಕೊಡಿಸಿ, ಒಂದೇ ಒಂದು ದಿನ ಪ್ರಚಾರಕ್ಕೆ ಹೋಗದೇ ಒಳಗೊಳಗೆ ಅಡ್ಜಸ್ಟ್ ಮಾಡಿಕೊಂಡು ಸೋತ್ರು ಅನ್ನೋ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸಿದ ನಂತರ ಸರಿಯಾದ ರೀತಿಯಲ್ಲಿ ಪ್ಲ್ಯಾನ್ ಮಾಡಲಿಲ್ಲ. ರಮೇಶ್ ನಂಬಿ ಕ್ಷೇತ್ರದಲ್ಲಿ ವರ್ಕೌಟ್ ಮಾಡದೇ ಕೈಚಲ್ಲಿ ಅಭ್ಯರ್ಥಿಗಳು ಹೀನಾಯ ಸೋಲು ಕಾಣುವಂತಾಯಿತು. ಇನ್ನು ರಮೇಶ್ ಜಾರಕಿಹೊಳಿಯ ಈ ನಡೆಯಿಂದ ಮೂಲ ಬಿಜೆಪಿಗರು ಬೇಸರಗೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸೇರಿದಂತೆ ಮತದಾರರನ್ನ ಸೆಳೆಯುವ ಕೆಲಸದಿಂದ ಅಂತರ ಕಾಯ್ದುಕೊಂಡರು. ಕೆಲವು ಕಡೆಗಳಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಲಿನಿಂದ ಎಚ್ಚೆತ್ತ ಮೂಲ ಬಿಜೆಪಿಗರು ರಮೇಶ್ ವಿರುದ್ದ ಇದೀಗ ಹೈಕಮಾಂಡ್ಗೆ ದೂರು ನೀಡಿದ್ದಾರಂತೆ.
ಬೆಳಗಾವಿಯಲ್ಲಿ 18 ಕ್ಷೇತ್ರಗಳ ಪೈಕಿ ಕೇವಲ ಏಳು ಸ್ಥಾನದಲ್ಲಿ ಗೆಲ್ಲಲು 11ಸ್ಥಾನದಲ್ಲಿ ಸೋಲಲು ನೇರವಾಗಿ ಕಾರಣ ರಮೇಶ್ ಎಂದು ಹೇಳಿದ್ದಾರೆ. ಪಕ್ಷ ಸಂಘಟನೆ ಮಾಡುವುದನ್ನ ಬಿಟ್ಟು ಬರೀ ಟಾರ್ಗೆಟ್ ರಾಜಕಾರಣ ಮಾಡುತ್ತಾ ಬಿಜೆಪಿ ಹೀನಾಯ ಸೋಲಿಗೆ ಕಾರಣವಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ, ಪಕ್ಷದಲ್ಲಿ ರಮೇಶ್ಗೆ ಜವಾಬ್ದಾರಿಯನ್ನ ನೀಡುವುದನ್ನ ಬಿಡಬೇಕು ಎಂದು ರಮೇಶ್ ವಿರುದ್ದ ನೇರವಾಗಿ ಮೂಲ ಕಾರ್ಯಕರ್ತರು ಹೈಕಮಾಂಡ್ಗೆ ದೂರು ನೀಡುವ ಕೆಲಸ ಮಾಡಿದ್ದಾರಂತೆ. ಸದ್ಯ ಜಿಲ್ಲೆಯಲ್ಲಿ ರಮೇಶ್ ವಿರುದ್ದ ಮೂಲ ಬಿಜೆಪಿಗರು ಸಿಡಿದೆದ್ದಿದ್ದು, ಮತ್ತೆ ಬಣ ಬಡಿದಾಟ ಜಿಲ್ಲೆಯಲ್ಲಿ ಜೋರಾಗಿದೆ. ಇನ್ನು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿರುವ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ‘ಮಟಾಷ್ ಲೆಗ್ ಯಾರದ್ದು ಅನ್ನೋದು ಈಗ ಗೊತ್ತಾಯಿತಾ? ಕಾಂಗ್ರೆಸ್ನಲ್ಲಿದ್ದಾಗ ಎನೂ ಮಾಡಿದ್ರು, ಇಲ್ಲಿಂದ ಬಿಟ್ಟು ಹೋಗಿ ಇದೀಗ ಬಿಜೆಪಿಯನ್ನ ಯಾವ ಪರಿಸ್ಥಿತಿಗೆ ತಂದಿದ್ದಾರೆ. ಗೋಕಾಕ್ ಹಗಣರವನ್ನೂ ಹೊರ ತೆಗೆಯುತ್ತೇನೆ ಎಂದು ರಮೇಶ್ ವಿರುದ್ದ ಚನ್ನರಾಜ ತಿರುಗೇಟು ನೀಡಿದ್ದಾರೆ.