ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ರನ್ನು ಪೊಲೀಸರು ಬಂಧಿಸಿದ ಬಳಿಕ ಬಿಡುಗಡೆ ಮಾಡಿದ್ದರು. ನಟನ ಬಂಧನಕ್ಕೆ ಹಲವರು ಖಂಡನೆ ವ್ಯಕ್ತಪಡಿಸಿದ್ದರು. ಸರ್ಕಾರ ಮತ್ತು ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ಸಂಧಾನ ಸಭೆ ನಡೆಸಲಾಗಿದ್ದು ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚಿತ್ರರಂಗಕ್ಕೆ ಒಂದಷ್ಟು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸರಷ್ಟೇ ಸೆಲೆಬ್ರಿಟಿಗಳಿಗೂ ಇರಬೇಕು. ಅಲ್ಲು ಅರ್ಜುನ್ ಅವರು ‘ಸಂಧ್ಯಾ’ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ರೇವತಿ ಎಂಬ ಅಭಿಮಾನಿಯು ಕಾಲ್ತುಳಿತದಿಂದ ಮೃತರಾದರು. ಇಂಥ ಸಂದರ್ಭಗಳಲ್ಲಿ ಶಾಂತಿ ಕಾಪಾಡಲು ಸೆಲೆಬ್ರಿಟಿಗಳು ಪೊಲೀಸರಿಗೆ ನೆರವು ನೀಡಬೇಕು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಸಿನಿಮಾಗಳ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿದಾಗ ಇಂಥ ದುರ್ಘಟನೆಗಳು ನಡೆಯುತ್ತವೆ. ಹಾಗಾಗಿ ಸದ್ಯಕ್ಕೆ ಎಲ್ಲ ರೀತಿಯ ಸ್ಪೆಷಲ್ ಶೋಗಳನ್ನು ನಿಷೇಧಿಸಲಾಗಿದೆ. ಅಲ್ಲದೇ, ಸೆಲೆಬ್ರಿಟಿಗಳು ತಮ್ಮ ಸ್ವಂತ ಬೌನ್ಸರ್ಗಳನ್ನು ನೇಮಿಸಿಕೊಂಡಾಗ ಬೌನ್ಸರ್ಗಳು ಜನರೊಂದಿಗೆ ಅಪಾಯಕಾರಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ಕೂಡ ರೇವಂತ್ ರೆಡ್ಡಿ ಅವರು ಎಚ್ಚರಿಗೆ ನೀಡಿದ್ದಾರೆ.
ಅಲ್ಲು ಅರ್ಜುನ್ ಅವರು ‘ಸಂಧ್ಯಾ’ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಬೌನ್ಸರ್ಗಳು ಜನರ ಜೊತೆ ನಡೆದುಕೊಂಡ ರೀತಿಯನ್ನು ಪೊಲೀಸರು ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಅವರು ಎಲ್ಲ ಬೌನ್ಸರ್ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ನಿರ್ಮಾಪಕ ದಿಲ್ ರಾಜು, ನಟ ಅಕ್ಕಿನೇನಿ ನಾಗಾರ್ಜುನ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮುಂತಾದವರು ಸಂಭೆಯಲ್ಲಿ ಭಾಗಿ ಆಗಿದ್ದರು.