ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಘೋಷಿಸಿದ್ದವರು ಯಾರು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಪಕ್ಷಗಳು ಜನರನ್ನು ಎತ್ತಿ ಕಟ್ಟುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ ವೇದಿಕೆ ಸಿದ್ಧ ಮಾಡಿದ್ದವರೇ ನೀವು, ಚುನಾವಣಾ ಪೂರ್ವದಲ್ಲಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಎಂದು ಹೇಳಿದ್ದ ನೀವು ಈಗ ಷರತ್ತು ವಿಧಿಸಿದ್ದಿರಿ.
ವಿನಾಕಾರಣ ಜನರನ್ನು ಪ್ರತಿಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂಬ ಆರೋಪ ಮಾಡಲಾಗುತ್ತಿದೆ” ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಬಾರಿ ಇಂಧನ ಸಚಿವರು ಯಾರಿದ್ರು, ಸಿಎಂ ಯಾರಿದ್ರು, ಇವರೇ ತಾನೇ ಇದ್ದಿದ್ದು, ಆಗ ಏಕೆ ಈ ಬಗ್ಗೆ ಯೋಚನೆ ಮಾಡಿಲ್ಲ. ಸಿದ್ದರಾಮಯ್ಯನವರೇ ಎಲ್ಲರಿಗೂ 200 ಯುನಿಟ್ ಉಚಿತ ಎಂದು ಹೇಳಿದ್ದು ನೀವೆ ಅಲ್ಲವೇ? ಒಂದು ಮನೆಯಲ್ಲಿ ಮೂರು ಮಹಡಿ ಕಟ್ಟಿರುತ್ತಾರೆ. ಮೀಟರ್ ಒಬ್ಬರ ಹೆಸರಿನಲ್ಲಿ ಇರುತ್ತದೆ.
ಆಗ ಬಾಡಿಗೆದಾರರು ಏನು ಮಾಡಬೇಕು. ನಾವು ಪ್ರತಿಪಕ್ಷದಲ್ಲಿ ಇರುವುದೇ ಯುದ್ಧ ಮಾಡಲು, ಇದನ್ನೇ ಮಾಡೋದು. ಬಾಡಿಗೆದಾರರಿಗೆ, ಹೊಸಮನೆ ಕಟ್ಟಿದವರಿಗೆ ಉಚಿತ ವಿದ್ಯುತ್ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಉಪಮುಖ್ಯಮಂತ್ರಿ ಸ್ನೇಹಕ್ಕೂ ಸಿದ್ಧ, ಯುದ್ಧಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಜನ ನಮ್ಮನ್ನು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಿರುವುದು ಸ್ನೇಹ ಮಾಡಲು ಅಲ್ಲ, ಯುದ್ಧ ಮಾಡಲು. ಜನಪರವಾದ ಹೋರಾಟವನ್ನು ಮಾಡುತ್ತೇವೆ. ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಡೂಪ್ಲಿಕೇಟ್ ಆಗಿವೆ ಎಂದು ಹೆಚ್ಡಿಕೆ ಕಿಡಿಕಾರಿದರು