ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡತ್ತಿದೆ. ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಿಗೆ ಚಿತ್ರಮಂದಿರದಲ್ಲಿ 15 ಕೋಟಿ ಗಳಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಈಗಾಗಲೇ ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಿದ್ದಾಗಿದೆ. ದುನಿಯಾ ವಿಜಯ್ ಅಂತೂ ಸತತ ಎರಡನೇ ಬಾರಿಗೆ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಇದೆಲ್ಲದರ ನಡುವೆ ದುನಿಯಾ ವಿಜಯ್ಗೆ ತಮಿಳು ಚಿತ್ರರಂಗದಿಂದ ಆಫರ್ ಬಂದಿದೆ.
‘ಭೀಮ’ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ದುನಿಯಾ ವಿಜಯ್, ‘ತಮಿಳಿನಿಂದ ಒಂದು ಆಫರ್ ಬರುವ ಮುನ್ಸೂಚನೆ ಇದೆ. ಲೋಕೇಶ್ ಕನಗರಾಜ್ ಸಿನಿಮಾ ಒಂದರ ಪಾತ್ರಕ್ಕಾಗಿ ನನ್ನ ಬಗ್ಗೆ ಆಲೋಚಿಸಿದ್ದಾರೆ ಎಂಬ ಸುದ್ದಿ ನನ್ನ ವರೆಗೂ ಬಂದಿದೆ. ಚೆನ್ನೈನವರೇ ಹೀಗೆ ಮಾತೊಂದನ್ನು ನನಗೆ ಹೇಳಿದ್ದಾರೆ. ಆದರೆ ನನಗೆ ಲೋಕೇಶ್ ಕನಗರಾಜ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಮುಂದೆ ನೋಡೋಣ ಏನಾಗುತ್ತದೆಯೋ’ ಎಂದಿದ್ದಾರೆ.
‘ಲೋಕೇಶ್ ಕನಗರಾಜ್ ನನ್ನ ಬಹಳ ಮೆಚ್ಚಿನ ನಿರ್ದೇಶಕ. ಅವರ ಮುಂದಿನ ಸಿನಿಮಾದಲ್ಲಿ ನನಗೊಂದು ಪಾತ್ರ ನೀಡುವ ಬಗ್ಗೆ ಅಂದುಕೊಂಡಿದ್ದಾರಂತೆ. ಒಂದೊಮ್ಮೆ ನನ್ನನ್ನು ನಟಿಸಲು ಕರೆದರೆ ಕಂಡಿತ ನಿರಾಕರಣೆ ಮಾಡುವುದಿಲ್ಲ. ಖಂಡಿತ ನಟಿಸುತ್ತೇನೆ. ನನಗೆ ಬಹಳ ಇಷ್ಟದ ನಿರ್ದೇಶಕ ಅವರು’ ಎಂದಿದ್ದಾರೆ. ಅಂದಹಾಗೆ ಲೊಕೇಶ್ ಕನಗರಾಜ್ ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಬಳಿಕ ‘ವಿಕ್ರಂ 2’, ‘ಖೈದಿ 2’ ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ದಾರೆ. ಇವುಗಳಲ್ಲಿ ದುನಿಯಾ ವಿಜಯ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಕಾದು ನೋಡಬೇಕಿದೆ.
ದುನಿಯಾ ವಿಜಯ್ಗೆ ಪರಭಾಷೆ ಸಿನಿಮಾಗಳಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿದೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ನಟಿಸಿರುವ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ದುನಿಯಾ ವಿಜಿ ನಟಿಸಿದ್ದರು. ಸ್ವತಃ ಬಾಲಕೃಷ್ಣ, ದುನಿಯಾ ವಿಜಯ್ ನಟನೆಗೆ ಭೇಷ್ ಎಂದಿದ್ದರು. ಇದೀಗ ತಮಿಳಿನಿಂದಲೂ ವಿಜಿತೆ ಆಫರ್ ಬರುವ ಸಾಧ್ಯತೆ ಇದೆ.