ಮುಂಬೈ: ಶ್ರೀಲಂಕಾ ವಿರುದ್ಧ ಭಾರತ ತಂಡ 302 ರನ್ಗಳ ಭರ್ಜರಿ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ತಮ್ಮ ಶೂಗಳನ್ನು ಯುವ ಅಭಿಮಾನಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಟೀಮ್ ಇಂಡಿಯಾ ನಾಯಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಏಕದಿನ ವಿಶ್ವಕಪ್ 33ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ ಕೇವಲ ಎರಡನೇ ಎಸೆತದಲ್ಲಿಯೇ ರೋಹಿತ್ ಶರ್ಮಾ ಅವರ ವಿಕೆಟ್ ಅನ್ನು ಕಳೆದುಕೊಂಡಿತ್ತು. ದಿಲ್ಷಾನ್ ಮಧುಶಂಕ ಅವರ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿದ್ದ ರೋಹಿತ್ ಶರ್ಮಾ, ಎರಡನೇ ಎಸೆತವನ್ನು ಅರಿಯುವಲ್ಲಿ ವಿಫಲವಾಗಿ ಕ್ಲೀನ್ ಬೌಲ್ಡ್ ಆಗಿದ್ದರು.
ಮುಂಬೈನ ತಮ್ಮ ತವರು ಅಂಗಣದಲ್ಲಿ ಸ್ಥಳೀಯ ಅಭಿಮಾನಿಗಳಿಗೆ ರೋಹಿತ್ ಶರ್ಮಾ ನಿರಾಶೆ ಮೂಡಿಸಿದರು. ಆದರೂ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ಬಲದಿಂದ ಟೀಮ್ ಇಂಡಿಯಾ ತನ್ನ ಪಾಲಿನ 50 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 357 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 358 ರನ್ಗಳ ಕಠಿಣ ಗುರಿ ನೀಡಿತ್ತು.
ಬಳಿಕ ಗುರಿ ಹಿಂಬಾಲಿಸಿದ ಶ್ರೀಲಂಕಾ ತಂಡ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಲಂಕಾದ ಯಾವೊಬ್ಬ ಬ್ಯಾಟ್ಸ್ಮನ್ 20ಕ್ಕೂ ಹೆಚ್ಚಿನ ವೈಯಕ್ತಿಕ ಮೊತ್ತ ಗಳಿಸುವಲ್ಲಿ ವಿಫಲವಾದರು. ಅಂತಿಮವಾಗಿ ಶ್ರೀಲಂಕಾ ತಂಡ ಕೇವಲ 19.4 ಓವರ್ಗಳಿಗೆ 55 ರನ್ಗಳಿಗೆ ಆಲ್ಔಟ್ ಆಯಿತು.