ಬಾಲಿವುಡ್ ಬ್ಯೂಟಿ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಮದುವೆಯಾಗಿ 15 ವರ್ಷ ಕಳೆದಿದೆ. 2021 ರಲ್ಲಿ ನೀಲಿ ಚಿತ್ರ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು ಸದ್ಯ ಅವುಗಳಿಂದ ಹೊರ ಬಂದಿರುವ ದಂಪತಿ ನೆಮ್ಮದಿಯಾಗಿದ್ದಾರೆ. ಶಿಲ್ಪಾ ಶೆಟ್ಟಿ, ಹಣಕ್ಕಾಗಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ ಎಂಬ ಮಾತು ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಈ ರೀತಿ ಆರೋಪ ಮಾಡುವವರಿಗೆ ನಟಿ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಹಾಗೂ ರಾಜ್ ಕುಂದ್ರಾ ಬಗ್ಗೆ ಮಾತನಾಡಿರುವ ಶಿಲ್ಪಾ ಶೆಟ್ಟಿ, ‘ನಾನು ರಾಜ್ ಕುಂದ್ರಾ ಅವರನ್ನು ವಿವಾಹವಾದಾಗ ಕುಂದ್ರಾ 108ನೇ ಶ್ರೀಮಂತ ಬ್ರಿಟೀಷ್ ಭಾರತೀಯ ಎನಿಸಿಕೊಂಡಿದ್ದರು. ಆದರೆ ಕೆಲವರು ನನ್ನ ಬಗ್ಗೆ ಗೂಗಲ್ ಮಾಡುವುದು ಮರೆತು ಬಿಡುತ್ತಾರೆ. ಶಿಲ್ಪಾ ಶೆಟ್ಟಿ ಆದ ನಾನು ಈ ಹಿಂದೆಯೂ ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಎಲ್ಲ ತೆರಿಗೆಗಳನ್ನು ನಾನೇ ಕಟ್ಟುತ್ತೇನೆ’ ಎಂದಿದ್ದಾರೆ.
‘ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ರಾಜ್ ಆಗ ಶ್ರೀಮಂತ ವ್ಯಕ್ತಿಯಾಗಿದ್ದರೂ ಸಹ ಹಣ ಎಂಬುದು ನಾನು ಅವರನ್ನು ಒಪ್ಪಿಕೊಳ್ಳಲು ಕಾರಣವಾಗಿರಲಿಲ್ಲ. ಅಸಲಿಗೆ ಆ ಸಮಯದಲ್ಲಿ ರಾಜ್ಗಿಂತಲೂ ಶ್ರೀಮಂತರಾಗಿದ್ದ ಕೆಲವರು ನನ್ನನ್ನು ವರಿಸಲು ಕೇಳಿದ್ದರು. ಆದರೆ ನನಗೆ ಹಣ ಎಂಬುದು ಆಗಲೂ ಮುಖ್ಯವಾಗಿರಲಿಲ್ಲ, ಈಗಲೂ ಮುಖ್ಯವಾಗಿಲ್ಲ’. ನನಗೆ ಅವರು ಇಷ್ಟವಾದರು, ಅವರ ನಡತೆ ಇಷ್ಟವಾಯಿತು. ಅದಕ್ಕೇ ಮದುವೆಯಾದೆ ಎಂದಿದ್ದಾರೆ.
31 ವರ್ಷದಿಂದ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿರುವ ನಟಿ ಶಿಲ್ಪಾ ಶೆಟ್ಟಿ, ಸದ್ಯ ಕೆಲವು ಹಿಂದಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಜೊತೆಗೆ ನಟನೆಯನ್ನು ಮುಂದುವರೆಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೋಲಿಸ್ ಫೋರ್ಸ್’ ವೆಬ್ ಸರಣಿಯಲ್ಲಿ ಇತ್ತೀಚೆಗಷ್ಟೆ ಕಾಣಿಸಿಕೊಂಡಿದ್ದಾರೆ.