ಚಿಕ್ಕಮಗಳೂರು:- ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಲೆಂದು ಚಿಕ್ಕಮಗಳೂರು ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಕಳಸದ ಕಳಸೇಶ್ವರಸ್ವಾಮಿಗೆ ಮಲೆನಾಡಿಗರು ಅಗಿಲು ಸೇವೆ ಸಲ್ಲಿಸಿದ್ದಾರೆ.
ತಾಲೂಕಿನ ಕಳಸೇಶ್ವರ ಸ್ವಾಮಿಗೆ ಕಳಸ ಸುತ್ತಮುತ್ತಲಿನ ಜನರು ಸೇವೆ ಸಲ್ಲಿಸಿ ಮಳೆ ನಿಲ್ಲುವಂತೆ ಪ್ರಾರ್ಥನೆ ನಡೆಸಿದರು. ಶತಮಾನಗಳಿಂದ ಅತಿವೃಷ್ಠಿ-ಅನಾವೃಷ್ಠಿಯಲ್ಲಿ ಪೂಜೆ ಸಲ್ಲಿಸಿದರೆ ಭಕ್ತರ ಬಯಕೆ ಈಡೇರಿಕೆಯಾಗುತ್ತದೆ ಎಂಬ ಪ್ರತೀತಿಯಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಗೆ ಕಳಸ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಮಳೆ ನಿಂತು ಜನರ ಜೀವನ ಉಳಿಯುವಂತೆ ಕಳಸೇಶ್ವರನಿಗೆ ಅಗಿಲು ಸೇವೆ ನೀಡಿ ಗ್ರಾಮಸ್ಥರು ಬೇಡಿಕೊಂಡಿದ್ದಾರೆ.
ಕಳಸ ತಾಲೂಕಿನಲ್ಲಿ 20 ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಮಳೆಯ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದ್ದರಿಂದ ಸುರಿಯುತ್ತಿರುವ ಮಳೆಯನ್ನು ನಿಲ್ಲಿಸಿ ಹದವಾದ ಮಳೆ ಕರುಣಿಸುವಂತೆ ಇಲ್ಲಿನ ಊರದೇವತೆ ಕಳಸೇಶ್ವರನಲ್ಲಿ ಭಕ್ತರು ಇಂದು ಮೊರೆ ಇಟ್ಟಿದ್ದಾರೆ.
ಅತಿಯಾದ ಮಳೆಯಿಂದ ಜನ, ಜಾನುವಾರುಗಳ ಜೊತೆ ಪ್ರಾಣಿಪಕ್ಷಿಗಳಿಗೂ ಬಾಧೆ ಉಂಟಾಗಿದೆ. ಆದ್ದರಿಂದ ಅತಿವೃಷ್ಟಿ ಆಗದಂತೆ ಹದವಾದ ಮಳೆ ನೀಡು ಎಂದು ಕಳಸೇಶ್ವರ ಸ್ವಾಮಿಗೆ ಅಗ್ನಿ ಸೂಕ್ತ ಮಂತ್ರ ಪಠಿಸಲಾಯಿತು. ಸಕಲ ಜೀವರಾಶಿಗೂ ಅನುಕೂಲವಾಗುವಂತೆ ಮಳೆ, ಬೆಳೆ ಕರುಣಿಸಬೇಕು ಎಂದು ಕಳಸೇಶ್ವರನಲ್ಲಿ ಪ್ರಾರ್ಥಿಸಲಾಯಿತು