ರಿಯಾದ್: ಏಪ್ರಿಲ್ ಮಧ್ಯಭಾಗದಿಂದ ಸೇನೆ ಮತ್ತು ಅರೆಸೇನಾ ಪಡೆಯ ನಡುವಿನ ಭೀಕರ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಸುಡಾನ್ನಲ್ಲಿ ಮತ್ತೆ 24 ಗಂಟೆಗಳ ಕದನ ವಿರಾಮ ಜಾರಿಗೆ ಎರಡೂ ಪಡೆಗಳು ಸಮ್ಮತಿಸಿವೆ ಎಂದು ಸೌದಿ ಅರೆಬಿಯಾ ಮತ್ತು ಅಮೆರಿಕದ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ಮುಂದಿನ 24 ಗಂಟೆಯ ಅವಧಿಯಲ್ಲಿ ಸುಡಾನ್ನಲ್ಲಿ ಕದನ ವಿರಾಮ ಜಾರಿಯಲ್ಲಿರುತ್ತದೆ. ನಿಷೇಧಿತ ಚಲನೆ, ವಿಮಾನ ಅಥವಾ ಡ್ರೋನ್ ಬಳಕೆಯಿಂದ ದೂರವಿರಲು, ವೈಮಾನಿಕ ಬಾಂಬ್ದಾಳಿ, ಫಿರಂಗಿ ದಾಳಿ, ಸ್ಥಾನಗಳ ಬಲವರ್ಧನೆ ಮತ್ತು ಪಡೆಗಳ ಮರುಪೂರಣ ಇತ್ಯಾದಿಗಳನ್ನು ನಡೆಸದಿರಲು ಸಂಬಂಧಿತ ಪಕ್ಷಗಳು ಒಪ್ಪಿಕೊಂಡಿವೆ. ಒಂದು ವೇಳೆ ಕದನ ವಿರಾಮದ ಉಲ್ಲಂಘನೆಯಾದರೆ ಮುಂದೆ ಸೌದಿ ಅರೆಬಿಯಾ ಈ ಮಾತುಕತೆಯಿಂದ ದೂರ ಉಳಿಯಲಿದೆ. ದೇಶದಾದ್ಯಂತ ಅಡೆತಡೆಯಿಲ್ಲದ ಚಲನೆಗೆ ಮತ್ತು ಮಾನವೀಯ ನೆರವು ವಿತರಣೆಗೆ ಅನುಕೂಲ ಮಾಡಿಕೊಡಲು ಎರಡೂ ಪಡೆಗಳು ಒಪ್ಪಿವೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆ ತಿಳಿಸಿದೆ.
ಈ ಹಿಂದೆ ನಡೆದಂತೆ, ಕದನ ವಿರಾಮದ ಉಲ್ಲಂಘನೆಯಾದರೆ ತೀವ್ರ ಪ್ರತಿಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಸುಡಾನ್ನಲ್ಲಿ ಹಿಂಸಾಚಾರವನ್ನು ಮುಂದುವರಿಸುವ ಜನರ ವಿರುದ್ಧ, ಪ್ರಮುಖ ರಕ್ಷಣಾ ಕಂಪೆನಿಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಶ್ವೇತಭವನ ಎಚ್ಚರಿಸಿದೆ. ಪಕ್ಷಗಳು ಕದನವಿರಾಮವನ್ನು ಅನುಸರಿಸುವ ಬಗ್ಗೆ ಗಂಭೀರವಾಗಿವೆ ಎಂದು ಮನವರಿಕೆಯಾದರೆ, ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸಲಾಗುವುದು ಎಂದು ಸೌದಿ ಅರೆಬಿಯಾ, ಅಮೆರಿಕ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.