ಕೊಬ್ಬರಿ ದರ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ. 2024ರ ಹಂಗಾಮಿಗೆ ಕೊಬ್ಬರಿಗೆ ಪ್ರತಿ ಕ್ವಿಂಟಲ್ಗೆ 250-300 ರೂಪಾಯಿ ಹೆಚ್ಚಿಸಿದ್ದು, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು 11,160-12,000 ರೂಪಾಯಿಗೆ ನಿಗದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜಾಗತಿಕವಾಗಿ ಕೊಬ್ಬರಿ ಬೆಲೆ ಕುಸಿದಿದೆ. ಆದರೆ ಮೋದಿ ಸರ್ಕಾರವು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇಕಡಾ 50 ರಷ್ಟು ಹೆಚ್ಚಿನ ಎಂಎಸ್ಪಿ ನೀಡಲು ನಿರ್ಧರಿಸಿದೆ. ಅದರಂತೆ, 2024 ರ ಋತುವಿನಲ್ಲಿ ಕೊಬ್ಬರಿಯ ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ 250-300 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಎಂದು ಸಚಿವ ಅನುರಾಗ್ ಠಾಕೂರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಯೋಚಿತ ಮತ್ತು ಸರಾಸರಿ ಗುಣಮಟ್ಟದ (FAQ) ಚೆಂಡು ಕೊಬ್ಬರಿಯ ಎಂಎಸ್ಪಿಯನ್ನು ಪ್ರತಿ ಕ್ವಿಂಟಲ್ಗೆ 250 ರೂಪಾಯಿ ಹೆಚ್ಚಳ ಮಾಡಿದ್ದು, 12,000 ರೂ.ಗೆ ಹೆಚ್ಚಿಸಲಾಗಿದೆ, ಆದರೆ ಮಿಲ್ಲಿಂಗ್ ಕೊಪ್ಪರ್ ಬೆಂಬಲ ಬೆಲೆಯನ್ನು ಮುಂದಿನ ವರ್ಷಕ್ಕೆ ಕ್ವಿಂಟಲ್ಗೆ 300 ರೂಪಾಯಿ ಹೆಚ್ಚಿಸಿದ್ದು, 11,160 ರೂಪಾಯಿ ನಿಗದಿ ಮಾಡಲಾಗಿದೆ ಎಂದರು. ಕಳೆದ 10 ವರ್ಷಗಳಲ್ಲಿ, ಸರ್ಕಾರವು 2014-15ರಲ್ಲಿ ಪ್ರತಿ ಕ್ವಿಂಟಲ್ಗೆ 5,250 ರೂ ಮತ್ತು 5,500 ರಿಂದ 2024-25 ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಮಿಲ್ಲಿಂಗ್ ಕೊಬ್ಬರಿಗೆ 11,160 ರೂ ಮತ್ತು ಚೆಂಡು ಕೊಬ್ಬರಿಗೆ 12,000 ರೂ.ಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.