ಐಶ್ವರ್ಯಾ ರೈ ಮಗಳು ಆರಾಧ್ಯ ಸದಾ ಅಮ್ಮನೊಂದಿಗೆ ಇರುತ್ತಾರೆ. ಸದಾ ಅಮ್ಮನ ಜೊತೆಯೇ ಸುತ್ತಾಡುವ ಮಗಳಿಗೆ ಐಶ್ವರ್ಯಾ ಪ್ರೀತಿಯ ಜೊತೆಗೆ ಸಂಸ್ಕಾರವನ್ನು ಹೇಳಿಕೊಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಆಗುವಂಥ ಘಟನೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ನಡೆದಿದೆ. ಕನ್ನಡದ ಖ್ಯಾತ ನಟ ಶಿವರಾಜ್ಕುಮಾರ್ ಅವರನ್ನು ನೋಡುತ್ತಿದ್ದಂತೆ ಆರಾಧ್ಯಾ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ.
ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ತೆರಳಿದ್ದರು. ಕನ್ನಡದ ಹಲವು ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಶಿವರಾಜ್ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಐಶ್ವರ್ಯಾ ಹಾಗೂ ಶಿವರಾಜ್ಕುಮಾರ್ ಅವರ ಭೇಟಿ ಆಗಿದೆ.
ಶಿವರಾಜ್ಕುಮಾರ್ ಹಾಗೂ ವಿಕ್ರಂ ಭೇಟಿ ಆದರು. ಈ ವೇಳೆ ಅಲ್ಲೇ ಇದ್ದ ಐಶ್ವರ್ಯಾ ರೈ ಅವರು ಶಿವರಾಜ್ಕುಮಾರ್ ಅವರನ್ನು ನೋಡುತ್ತಿದ್ದಂತೆ ಓಡೋಡಿ ಬಂದು ಶಿವಣ್ಣನಿಗೆ ಶೇಕ್ಹ್ಯಾಂಡ್ ಮಾಡಿದರು. ಇದರ ಜೊತೆಗೆ ಅಲ್ಲೇ ಇದ್ದ ಮಗಳಿಗೆ ಶಿವರಾಜ್ಕುಮಾರ್ ಅವರನ್ನು ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.