ಚೀಫ್ ಸೆಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ಆಯ್ಕೆ ಅತ್ಯಂತ ಮಹತ್ವದ ನಿರ್ಧಾರ ಆಗಿದೆ. ಏಕೆಂದರೆ, ಚೀಫ್ ಸೆಲೆಕ್ಟರ್ ಹುದ್ದೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿದ ಅನುಭವ ಹೊಂದಿರುವ ಟೀಮ್ ಇಂಡಿಯಾ ಮಾಜಿ ಆಟಗಾರನ ಆಯ್ಕೆ ಆಗಿರುವುದು ಇದು ಎರಡನೇ ಬಾರಿ ಆಗಿದೆ. ಇನ್ನು ಅಜಿತ್ ಅಗರ್ಕರ್ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡದ ಪರ ಆಡಿ ಐಪಿಎಲ್ನಲ್ಲೂ ತಮ್ಮ ಕರಾಮತ್ತು ಪ್ರದರ್ಶಿದ್ದ ಅಪ್ರತಿಮ ವೇಗದ ಬೌಲರ್ ಆಗಿದ್ದರು.
ಟೀಮ್ ಇಂಡಿಯಾದ ಆಯ್ಕೆ ಸಮಿತಿಯಲ್ಲಿ ಈಗ ಶಿವಸುಂದರ್ ದಾಸ್, ಸುಬ್ರೊತೊ ಬ್ಯಾನರ್ಜಿ, ಸಲಿಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಇದ್ದು, ಐದನೇ ಸದಸ್ಯ ಹಾಗೂ ಸಮಿತಿ ಮುಖ್ಯಸ್ಥನಾಗಿ ಅಜಿತ್ ಅಗರ್ಕರ್ ಸೇರ್ಪಡೆ ಆಗಿದೆ. ಈ ಸಮಿತಿಯಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಅಜಿತ್ ಅಗರ್ಕರ್ ಅವರಿಗೆ ಇರುವ ಕಾರಣ ಅವರನ್ನು ಚೀಫ್ ಸೆಲೆಕ್ಟರ್ ಆಗಿ ನೇಮಕ ಮಾಡಲಾಗಿದೆ.
ಇಲ್ಲಿಯವರೆಗೂ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದವರು ಕೆಲವೇ ಕೆಲ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುತ್ತಿದ್ದರು. ಅದಕ್ಕೆ ಕಾರಣ ಚೀಫ್ ಸೆಲೆಕ್ಟರ್ಗೆ ಇದ್ದ ಕಡಿಮೆ ಸಂಬಳ. ಆದ್ರೆ ನಾನು ಚೀಫ್ ಸೆಲೆಕ್ಟರ್ ಆಗ್ಬೇಕು ಅಂದ್ರೆ ಮೊದಲು ಸಂಬಳ ಹೆಚ್ಚಿಸಿ ಅಂತ ಬೇಡಿಕೆಯಿಟ್ಟಿದ್ದ ಅಗರ್ಕರ್, ವಾರ್ಷಿಕ ಒಂದು ಕೋಟಿಯಿಂದ 3 ಕೋಟಿಗೆ ಸಂಬಳ ಹೆಚ್ಚಿಸಿಕೊಂಡು ಚೀಫ್ ಸೆಲೆಕ್ಟರ್ ಆಗಿದ್ದಾರೆ.
ಭಾರತದ ಪರ 222 ಪಂದ್ಯಗಳನ್ನಾಡಿರುವ ಅಜಿತ್ ಅಗರ್ಕರ್, 26 ಟೆಸ್ಟ್ನಿಂದ 58, 191 ಒನ್ಡೇಯಲ್ಲಿ 288 ಮತ್ತು 4 ಟಿ20ಯಿಂದ 3 ವಿಕೆಟ್ ಪಡೆದಿದ್ದಾರೆ. ಇದರ ಜತೆಗೆ ಬ್ಯಾಟಿಂಗ್ನಲ್ಲಿ ರನ್ನೂ ಹೊಡೆದಿದ್ದಾರೆ. ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ, ವೇಗದ 50 ವಿಕೆಟ್ ಪಡೆದಿರುವ ಸಾಧನೆ ಅಜಿತ್ ಅಗರ್ಕರ್ ಹೆಸರಿನಲ್ಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ಈಗ ಇದೇ ಚೀಫ್ ಸೆಲೆಕ್ಟರ್ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಆ ಸವಾಲುಗಳನ್ನ ಗೆಲ್ಲೋದು ಸುಲಭವಲ್ಲ.