ಕಳೆದ ಎಂಟತ್ತು ದಿನಗಳಿಂದ ಸ್ಯಾಂಡಲ್ ವುಡ್ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾಕ್ ಸಮರ ಮುಂದುವರೆಯುತ್ತಲೆ ಇದೆ. ಸುದೀಪ್ ತಮ್ಮಿಂದ ಅಡ್ವಾನ್ಸ್ ಹಣ ಪಡೆದು ಸಿನಿಮಾ ಮಾಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಇದೀಗ ಇಂಥದ್ದೇ ಆರೋಪ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ತಲಾ ಅಜಿತ್ ಮೇಲೆ ಕೇಳಿ ಬಂದಿದೆ.
ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ತಮಗೆ ಮೋಸ ಮಾಡಿದ್ದಾರೆ ಎಂದು ನಿರ್ಮಾಪಕ ಮಾಣಿಕಂ ನಾರಾಯಣನ್ ಆರೋಪ ಮಾಡಿದ್ದಾರೆ. ಅಜಿತ್ ತಮ್ಮಿಂದ ಹಣ ಪಡೆದು, ಸಿನಿಮಾ ಮಾಡದೇ ಸತಾಯಿಸಿದ್ದಾರೆ ಎಂದು ನಾರಾಯಣನ್ ಆರೋಪಿಸಿದ್ದು ಸದ್ಯ ಈ ಹೇಳಿಕೆ ತಮಿಳು ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾರಾಯಣ್, ನಟ ಅಜಿತ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಅಜಿತ್ ಅವರು ಬಹಳ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಮಲೇಷಿಯಾಗೆ ಕಳಿಸಲು ನನ್ನಿಂದ ಹಣ ಪಡೆದಿದ್ದರು. ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡೋಣ, ಈ ಹಣವನ್ನು ಸಂಭಾವನೆಗೆ ಸರಿ ಮಾಡಿಕೊಳ್ಳೋಣ ಎಂದಿದ್ದರು. ಆದರೆ ಇದುವರೆಗೂ ಅವರು ನನ್ನ ಜೊತೆ ಸಿನಿಮಾವನ್ನೂ ಮಾಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ’ ಎಂದು ಮಾಣಿಕಂ ನಾರಾಯಣನ್ ಹೇಳಿದ್ದಾರೆ.
‘ಈ ಬಗ್ಗೆ ಅಜಿತ್ ಇಷ್ಟು ವರ್ಷಗಳ ತನಕ ಮಾತನಾಡಿಲ್ಲ. ತನ್ನನ್ನು ತಾನು ಒಳ್ಳೆಯವನು ಅಂತ ಅವರು ಹೇಳಿಕೊಳ್ಳುತ್ತಾರೆ. ಆದರೆ ಅವರು ಒಳ್ಳೆಯ ಮನುಷ್ಯ ಅಲ್ಲ. ಅವರದ್ದು ಒಳ್ಳೆಯ ಕುಟುಂಬ. ವರ್ಷಕ್ಕೆ 50 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಹೀಗಿರುವಾಗ ಅವರು ಜನರಿಗೆ ಯಾಕೆ ಮೋಸ ಮಾಡಬೇಕು? ಅವರ ಜೊತೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಿದ್ದರೂ ಕೂಡ ಅವರು ನಿರ್ಮಾಪಕರಿಗೆ ಸಹಾಯ ಮಾಡಿಲ್ಲ’ ಎಂದು ಮಾಣಿಕಂ ನಾರಾಯಣನ್ ಹೇಳಿದ್ದಾರೆ. ಮಾಣಿಕಂ ನಾರಾಯಣ್ ಆರೋಪಕ್ಕೆ ನಟ ಅಜಿತ್ ಕುಮಾರ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.