ಕೋಲ್ಕತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್ ನಲ್ಲಿ ಸಿಂಹಗಳಿಗೆ ನಾಮಕರಣ ಮಾಡಿರುವುದು ಇದೀಗ ಭಾರೀ ವಿವಾದಕ್ಕೀಡಾಗಿದೆ. ಈ ಬೆನ್ನಲ್ಲೇ ಅರಣ್ಯ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ. ಹೌದು. ಇತ್ತೀಚೆಗೆ ಸಫಾರಿ ಪಾರ್ಕ್ಗೆ ಒಡಿಶಾದಿಂದ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಹೆಣ್ಣು ಸಿಂಹಕ್ಕೆ ʼಸೀತಾʼ (Sita) ಮತ್ತು ʼಅಕ್ಬರ್ʼ (Akbar) ಎಂದು ನಾಮಕರಣ ಮಾಡಿರುವುದು ಬಯಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷದ್ (VHP) ಮುಖಂಡರು ರೊಚ್ಚಿಗೆದ್ದಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ವಿಹೆಚ್ಪಿ: ಅರಣ್ಯಾಧಿಕಾರಿಗಳು ಹೆಣ್ಣು ಸಿಂಹಕ್ಕೆ ‘ಸೀತಾ’ ಹಾಗೂ ಗಂಡು ಸಿಂಹಕ್ಕೆ ‘ಅಕ್ಟರ್’ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು. ಸಿಂಹಗಳನ್ನು ಬೇರೆ ಬೇರೆ ಕಡೆ ಇಡಬೇಕು ಎಂದು ಆಗ್ರಹಿಸಿ ವಿಹೆಚ್ಪಿ ನಾಯಕರು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಫೆ.20ರಂದು ವಿಚಾರಣೆಗೆ ಬರಲಿದೆ.
ಅರಣ್ಯ ಇಲಾಖೆ ಸ್ಪಷ್ಟನೆ: ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್ನಿಂದ ಸ್ಥಳಾಂತರಿಸಲಾಗಿದೆ ಮತ್ತು ಫೆಬ್ರವರಿ 13 ರಂದು ಸಫಾರಿ ಪಾರ್ಕ್ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ವಿವಾದದ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.